Pages

Friday, 3 November 2017

ಮುಕ್ತ ಸಾಹಿತ್ಯ ವೇದಿಕೆ ಹಾಗೂ ಪ್ರಮತಿಯ ಪರಿಚಯ



ಚಾಮರಾಜನಗರದ ಕೊಳ್ಳೇಗಾಲದಲ್ಲಿ ೨ ವರ್ಷಗಳ ಹಿಂದೆ ಕೆಲವು ಸಾಹಿತ್ಯಾಸಕ್ತ ಮಹಿಳೆಯರು ಹುಟ್ಟು ಹಾಕಿದ ವೇದಿಕೆಯೇ "ಮುಕ್ತ ಸಾಹಿತ್ಯ ವೇದಿಕೆ." ೯ ಮಹಿಳೆಯರಿಂದ ಆರಂಭಗೊಂಡ ಈ ವೇದಿಕೆ ಇಂದು ೪೫ ಸದಸ್ಯೆಯರನ್ನು ಹೊಂದಿದೆ. ಪ್ರತಿ ವಾರ ಸೇರುವ ವೇದಿಕೆ ಸಾಹಿತ್ಯ, ಭಾಷೆ, ಪ್ರಸಕ್ತ ವಿದ್ಯಮಾನ, ಮಹಿಳೆಯರ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತದೆ. 

ಇದರೊಂದಿಗೆ ಮಹಿಳಾ ಪತ್ರಿಕೆಯನ್ನು ತರುವ ಉತ್ಸಾಹದೊಂದಿಗೆ ನಮ್ಮ ಸದಸ್ಯೆಯರು "ಪ್ರಮತಿ" ಎನ್ನುವ ಪತ್ರಿಕೆಯನ್ನು ಹೊರತರಲಾರಂಭಿಸಿದೆ. ಅದಕ್ಕೆ ಪೂರಕವಾಗಿ ಈ ಬ್ಲಾಗ್ ಆರಂಭಿಸುತ್ತಿದ್ದೇವೆ. 

ಓದುಗರು ತಮ್ಮ ಸಲಹೆ ಸೂಚನೆ ನೀಡಬಹುದು. 
- ಸಂಪಾದಕ ಮಂಡಳಿ 



ವ್ಯಕ್ತಿ ಪರಿಚಯ - ಆಲೂರು ವೆಂಕಟರಾಯರು




ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿ,ಕನ್ನಡಿಗರನ್ನು ಜಾಗೃತಗೊಳಿಸಿ ಭವ್ಯ ಕರ್ನಾಟಕದ ಕನಸ್ಸನ್ನು ಕಂಡು ಸಾಕಾರಗೊಳಿಸಿದ ಆಲೂರು ವೆಂಕಟರಾಯರು 1880 ಜುಲೈ 12 ರಂದು ಬಿಜಾಪುರದಲ್ಲಿ ಜನಿಸಿದರು.
ತಂದೆ ಭೀಮರಾವ್ ಮತ್ತು ತಾಯಿ ಭಾಗೀರಥಮ್ಮ. ಇವರ ವಂಶಜರಿಗೆ ಆಲೂರು ಜಹಗೀರಾಗಿ ಬಂದಿದ್ದರಿಂದ ಆಲೂರು ಎಂಬುದು ಇವರ ಮನೆತನದ ಹೆಸರಾಗಿದೆ. ಇವರ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಧಾರವಾಡದಲ್ಲಿ ನಡೆಯಿತು. ಈ ಸಮಯದಲ್ಲಿ ಹಲವು ಚಳವಳಿಗಳಲ್ಲಿಯೂ ಭಾಗವಹಿಸಿದ್ದರು ಹಾಗೂ ಶಾಲಾ ಶಿಕ್ಷಕರುಗಳಿಂದ ಪ್ರಭಾವಿತಗೊಂಡಿದ್ದರು. ಇದೇ ಅವರ ಮುಂದಿನ ಹೋರಾಟಕ್ಕೆ ನಾಂದಿಯಾಯಿತು. ನಂತರ ಇವರು ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಸೇರಿದರು. ಸಹಪಾಠಿ ವಿನಾಯಕ ದಾಮೋದರ ಸಾವರಕರ ಮತ್ತು ಅವರ ಸ್ವಾತಂತ್ರ್ಯ ಹೋರಾಟಗಾರ ಸ್ನೇಹಿತರ ಒಡನಾಟದಿಂದ ಇವರಲ್ಲಿ ರಾಷ್ಟ್ರಾಭಿಮಾನ ಜಾಗೃತಗೊಂಡಿತು. ಅಲ್ಲದೆ ಗೋಖಲೆ,ರಾಜವಾಡ, ಮೊದಲಾದವರುಗಳಿಂದ ಸ್ಫೂರ್ತಿಗೊಂಡಿದ್ದರು. ತಿಲಕರ ಒಡನಾಟ ಮತ್ತು ಅವರ ಉಗ್ರಲೇಖನಗಳು ಇವರ ಮೇಲೆ ತುಂಬಾ ಪ್ರಭಾವ ಬೀರಿತು. ಆ ಸಮಯದಲ್ಲಿ ವೆಂಕಟರಾಯರಿಗೆ ಕರ್ನಾಟಕತ್ವದ ಕಲ್ಪನೆ ಇನ್ನೂ ಬಂದಿರಲಿಲ್ಲ. ಆದರೂ ಅವರಲ್ಲಿ ಕನ್ನಡಾಭಿಮಾನವಿತ್ತು. ಅಂದು ಕರ್ನಾಟಕವು ಮಹಾರಾಷ್ಟ್ರದ ಒಂದು ಅಂಗವಾಗಿತ್ತು. ಅವರು ಓದುತ್ತಿದ್ದ ಕಾಲೇಜಿನ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳು ಇರಲಿಲ್ಲ. ಇದಕ್ಕಾಗಿ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಧಾರವಾಡದಿಂದ ಕನ್ನಡ ಪುಸ್ತಕಗಳನ್ನು ತರಿಸಲಾಯಿತು. 1903 ರಲ್ಲಿ  ಬಿ.ಎ ಪದವಿ ಮುಗಿಸಿದರು.
ಕಾಲೇಜು ಶಿಕ್ಷಣ ಮುಗಿಸಿದ ವೆಂಕಟರಾಯರು ಒಮ್ಮೆ ಹಂಪೆಗೆ ಹೋಗಿದ್ದರು. ಅಲ್ಲಿನ ಅವಶೇಷಗಳು ಅವರ ಮೇಲೆ ತುಂಬಾ ಪರಿಣಾಮ ಬೀರಿದವು. " ಆ ದಿವಸ ನನ್ನ ಮನದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು ಚಲನಚಿತ್ರ ಪಟದಲ್ಲಿ ವಿದ್ಯುತ್ ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡ ಹತ್ತಿತು.ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿಧದ ತರಂಗಗಳಿಗೆ ಇಂಬುಕೊಟ್ಟಿತು.ಹೃದಯ ಸಮುದ್ರವು ಅಲ್ಲೋಲಕಲ್ಲೋಲವಾಯಿತು.ಆ ದಿವಸವು ನನ್ನ ಜೀವನಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಎಂದು ತಮ್ಮ ಅಂದಿನ ಅನುಭವವನ್ನು ಸ್ವತಃ ಅವರೇ ಹೇಳಿದ್ದಾರೆ. ಅಂದಿನಿಂದ ಅವರ ಕನ್ನಡಾಭಿಮಾನ ಹೆಚ್ಚಾಗಿ, ಕರ್ನಾಟಕದ ಗತವೈಭವವನ್ನು ಕನ್ನಡಿಗರ ಮುಂದಿಟ್ಟು ಅವರನ್ನು ಎಚ್ಚರಗೊಳಿಸಬೇಕೆಂದು ದೃಢಸಂಕಲ್ಪ ಮಾಡಿದರು. ನಂತರ ಕಾನೂನು ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ 1905 ರಲ್ಲಿ ಮುಗಿಸಿದರು. ನಂತರದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಧಾರವಾಡದಲ್ಲಿ ಪ್ರಾರಂಭಿಸಿದರು. ಇಟಲಿಯ ಮ್ಯಾಝಿನಿಯಿಂದ ಪ್ರಭಾವಿತರಾದ ಇವರು ಅವನ ಜೀವನಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದರು. ಅದರಲ್ಲಿನ " ಇಟಲಿಯು ಪರದಾಸ್ಯದಲ್ಲಿ ತೊಳಲುತ್ತ ಸೂತಕಾವಸ್ಥೆಯಲ್ಲಿರುವಾಗ ತರುಣರು ನಗು ಮೊಗದಿಂದ ನಲಿದಾಡುವುದೆಂದರೇನು?"  ಎಂಬ ವಾಕ್ಯದಿಂದ ಪ್ರಚೋದನೆಗೊಂಡ ವೆಂಕಟರಾಯರು ತಮ್ಮ ವಕೀಲಿವೃತ್ತಿಯನ್ನು ಬಿಟ್ಟು ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಿದರು. 
ಅಂದು ಜನರಲ್ಲಿ ರಾಷ್ಟ್ರೀಯತೆ,ರಾಷ್ಟ್ರಾಭಿಮಾನಗಳನ್ನು ಮೂಡಿಸಲು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿತ್ತು. ಅಂತಯೇ ವೆಂಕಟರಾಯರು ಸಹ ಧಾರವಾಡದಲ್ಲಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ಇಲ್ಲಿ ರಾಷ್ಟ್ರಾಭಿಮಾನದ ಜೊತೆಗೆ ಇಂಗ್ಲಿಷ್ ರ ಗುಲಾಮಗಿರಿಯಿಂದ ಹೊರಬರಲು  ಸ್ವಾವಲಂಬನೆಯನ್ನು ಕಲಿಸಲಾಗುತ್ತಿತ್ತು. ಈ ಶಾಲೆಯಲ್ಲಿ ದೀಪದಕಡ್ಡಿ ತಯಾರಿಕೆ,ಗೇಣಿಗೆ,ಚಿತ್ರಕಲೆ,ಮರಗೆಲಸ, ಮುದ್ರಣಕಲೆ ಮೊದಲಾದ ಸ್ವಯಂ ಉದ್ಯೋಗ ತರಬೇತಿಯನ್ನು ಕೊಡಲಾಗುತ್ತಿತ್ತು. ಆದರೆ ಸರ್ಕಾರದ ನೀತಿ ಮತ್ತು ಹಣದ ಅಭಾವದಿಂದ ಈ ಶಾಲೆ ಹೆಚ್ಚು ದಿನ ನಡೆಯಲಿಲ್ಲ. ವೆಂಕಟರಾಯರು ರಾಷ್ಟ್ರೀಯ ಚಳವಳಿಯ ಜೊತೆಯಲ್ಲೇ ಕನ್ನಡಭಾಷೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟವನ್ನು ಮಾಡುತ್ತಿದ್ದರು. ವೆಂಕಟರಾಯರು ನೇತೃತ್ವದಲ್ಲಿ 1936 ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ವಿಜಯನಗರ ಸ್ಥಾಪನೆ ಷಡಶತಮಾನೋತ್ಸವವು ಹಂಪೆಯಲ್ಲಿ ನಡೆಯಿತು. ಇದರಲ್ಲಿ ಐತಿಹಾಸಿಕ ಸಮ್ಮೇಳನ, ವಸ್ತು ಪ್ರದರ್ಶನ, ಸಂಗೀತಕಛೇರಿಗಳು,ನಾಟಕ ಪ್ರದರ್ಶನಗಳು ಮೊದಲಾದ ಕಾರ್ಯಕ್ರಮಗಳು ನಡೆದವು.
ಕರ್ನಾಟಕದಲ್ಲಿ ಒಂದೇ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕೆಂಬುದು ವೆಂಕಟರಾಯರು ಕನಸ್ಸಾಗಿತ್ತು. ಆದರೆ ಅದು ನೆರವೇರದೆ 1914 ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು.
ಕರ್ನಾಟಕತ್ವದ ಪರಿಕಲ್ಪನೆ ಹೊಂದಿದ್ದ ವೆಂಕಟರಾಯರಿಗೆ  ಕರ್ನಾಟಕಕ್ಕೆ ತನ್ನದೇ ಆದ ರಾಜಕೀಯ ಪರಿಷತ್ತು ಇರಬೇಕೆಂದು ಅವರ ನಿಲುವಾಗಿತ್ತು. ಅದುವರೆವಿಗೂ ಕರ್ನಾಟಕದ ಉತ್ತರ ಭಾಗ ದಕ್ಷಿಣ ಮಹಾರಾಷ್ಟ್ರವಾಗಿತ್ತು ,ದಕ್ಷಿಣ ಭಾಗ ಮೈಸೂರಾಗಿತ್ತು. ಹೀಗಾಗಿ ಕರ್ನಾಟಕಕ್ಕೆ ಪ್ರತ್ಯೇಕ ಪರಿಷತ್ತು ಬೇಕೆಂದು ಇವರು ವಾದಿಸುತ್ತಿದ್ದರು. ಪರಿಣಾಮವಾಗಿ 1920 ರಲ್ಲಿ  ಧಾರವಾಡದಲ್ಲಿ ವಿ಼. ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ಪ್ರಥಮ ಕರ್ನಾಟಕ ಪರಿಷತ್ತಿನ ಅಧಿವೇಶನ ನಡೆಯಿತು. ಇದೇ ಇಂದಿನ ಕೆ.ಪಿ.ಸಿ.ಸಿ.
ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಇತಿಹಾಸವನ್ನು ತಿಳಿಯಬೇಕಾದರೆ ಒಂದು ಪ್ರತ್ಯೇಕ ಸಂಶೋಧನ ಮಂಡಳಿಯ ಅವಶ್ಯಕತೆಯಿದೆ ಎಂದ ವೆಂಕಟರಾಯರು 1914 ರಲ್ಲಿ ಮಂಡಳಿಯೊಂದನ್ನು ಸ್ಥಾಪಿಸಿದರು. ಜೊತೆಗೆ ಎಲ್ಲೆಡೆ ಕಾಣ ಬರುತ್ತಿದ್ದ ಶಿಲಾಶಾಸನಗಳಲ್ಲಿನ ಲಿಪಿಗಳಿಂದಲೂ ಸಹ ಇತಿಹಾಸವನ್ನು ತಿಳಿಯಬಹುದೆಂದು ಮನಗಂಡ ವೆಂಕಟರಾಯರು ಅವುಗಳ ಅಧ್ಯಯನಕ್ಕಾಗಿ " ಸರ್ವೇಕ್ಷಣ ಯೋಜನೆ" ಯನ್ನು ಪ್ರಾರಂಭಿಸಿದರು.
ಕನ್ನಡದಲ್ಲಿ ಉತ್ತಮ ಗ್ರಂಥಗಳ ಕೊರತೆಯಿರುವುದನ್ನು ಅರಿತ ವೆಂಕಟರಾಯರು ಧಾರವಾಡದಲ್ಲಿ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ಆಯೋಜಿಸಿದರು. ಅದರಲ್ಲಿ  ಎಲ್ಲರೂ ' ಕರ್ನಾಟಕ ಗ್ರಂಥಮಾಲೆ ' ಎಂಬ ಹೆಸರಿನಿಂದ ಪ್ರಕಟಿಸಬೇಕೆಂದು ಅಂಗೀಕರಿಸಲಾಯಿತು. ಎರಡನೇ ಸಮ್ಮೇಳನವು ಧಾರವಾಡದಲ್ಲಿ ನಡೆಯಿತು. ಮೂರನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. ಇದರ ಫಲವಾಗಿ 1915 ರಲ್ಲಿ " ಕರ್ನಾಟಕ ಸಾಹಿತ್ಯ ಪರಿಷತ್ತು " ಸ್ಥಾಪನೆಯಾಯಿತು.ಇದು ವೆಂಕಟರಾಯರ ಮಹತ್ಕಾರ್ಯಗಳಲ್ಲಿ ಒಂದಾಗಿದೆ. ಇದೇ ಈಗಿನ ಕನ್ನಡ ಸಾಹಿತ್ಯ ಪರಿಷತ್ತು.
1905 ರಲ್ಲಿ " ವಿದ್ಯಾವರ್ಧಕ ಸಂಘ" ಕ್ಕೆ ಸೇರಿ, ಮೂಲಕ ವೆಂಕಟರಾಯರು ಕನ್ನಡದ ಅಭ್ಯಾಸವನ್ನು  ಪ್ರಾರಂಭಿಸುವುದರ ಮೂಲಕ ಕನ್ನಡ ಸಾಹಿತ್ಯ ಕೃಷಿಯನ್ನು ಆರಂಭಿಸಿದರು.
" ವಾಗ್ಭೂಷಣ " ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡು ಅದಕ್ಕೆ ಹೊಸ ರೂಪವನ್ನು ನೀಡಿದರು. ಇವರ ಮೊದಲ ಕೃತಿ " ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯರು" ಇದರಿಂದ ಪ್ರೇರಣೆಗೊಂಡ ಶಾಂತಕವಿ ವಿಜಯ ವಿದ್ಯರಣ್ಯ ಕೀರ್ತನೆಯನ್ನು ಬರೆದರು. 
1912 ರಲ್ಲಿ ವೆಂಕಟರಾಯರು " ಕರ್ನಾಟಕದ ಗತವೈಭವ " ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ ಕನ್ನಡಿಗರ ಪ್ರಾಚೀನ ಇತಿಹಾಸವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. " ನಿಮ್ಮ ನಿರಭಿಮಾನದ ಮುಸುಕನ್ನು ಹಾರ ಹಿಡೆಯಲಿಕ್ಕೆ ನೀವು ಇತಿಹಾಸದ ಶರಣು ಹೋಗಿರಿ " ಎಂದು ಕನ್ನಡಿಗರಿಗೆ ಇತಿಹಾಸವನ್ನು  ತಿಳಿಸುವ ಉದ್ದೇಶದಿಂದಲೇ ಈ ಕೃತಿಯನ್ನು ಬರೆದಿರುವುದಾಗಿ ಸ್ವತಃ ವೆಂಕಟರಾಯರೇ ಹೇಳಿದ್ದಾರೆ. ಇದಲ್ಲದೆ " ಕರ್ನಾಟಕದ ವೀರರತ್ನಗಳು" "ಕರ್ನಾಟಕದ ಸೂತ್ರಗಳು" ಮತ್ತು " ಕರ್ನಾಟಕತ್ವದ ವಿಕಾಸ" ಗ್ರಂಥಗಳನ್ನು ಬರೆದು ಕನ್ನಡಿಗರು ಸ್ಫೂರ್ತಿಗೊಳ್ಳುವಂತೆ ಮಾಡಿದರು.
ಇಂಗ್ಲಿಷ್ ನ ಸ್ಪೆನ್ಸರನ Education ಮತ್ತು ಅರಿಸ್ಟಾಟಲ್‌ನ Data of ethics, J.S. ಮಿಲ್ ನ Liberty ಮೊದಲಾದ ಕೃತಿಗಳನ್ನು  ಕನ್ನಡಕ್ಕೆ ಅನುವಾದಿಸಿದರು. 
ಗಾಂಧಿಚರಿತೆ,ಮ್ಯಾಝಿನಿ ಚರಿತೆ, ಅರವಿಂದರ ಪತ್ರ, ಅರವಿಂದರ ರಾಜಕಾರಣ, ಚಳವಳಿಗಳ ಆತ್ಮ ಇವುಗಳನ್ನು ಭಾಷಾಂತರಿಸಿದರು.ಹಾಗು ವಿವೇಕಾನಂದರ " ಪೂರ್ವ ಮತ್ತು ಪಶ್ಚಿಮ, ಭಕ್ತಿಯೋಗವನ್ನು ಭಾಷಾಂತರಿಸಿದರು.
ರಾಷ್ಟ್ರೀಯತ್ವದ ಅರಿವು ಮೂಡಿಸಲು " ರಾಷ್ಟ್ರೀಯತ್ವದ ಮೀಮಾಂಸೆ" ಯನ್ನು ಬರೆದರು.ಇದಲ್ಲದೆ ' ನವಜೀವನ ಗ್ರಂಥಮಾಲೆ' ಯನ್ನು ಆರಂಭಿಸಿದರು. ಕನ್ನಡಿಗರ ಪರಭಾಷಾ ವ್ಯಾಮೋಹವನ್ನು ಹೋಗಲಾಡಿಸಲು " ಕನ್ನಡಿಗರ ಭ್ರಮನಿರಸನ" ಎಂಬ ನಾಟಕವನ್ನು ಬರೆದರು. ತಿಲಕರ " ಗೀತಾರಹಸ್ಯ" ವನ್ನು ಕನ್ನಡಕ್ಕೆ  ಭಾಷಾಂತರಿಸಿದರು. ಅಲ್ಲದೆ ಗೀತಾಪ್ರಕಾಶ,ಗೀತಾಸಂದೇಶ,ಗೀತಾಪ್ರಭಾವ ಭಾಗ 1,2 ನ್ನು ಬರೆದರು. ದ.ರಾ.ಬೇಂದ್ರೆಯವರ " ಕೃಷ್ಣಕುಮಾರಿ" ಕವನ ಸಂಕಲನವನ್ನು ಪ್ರಕಟಿಸಿದರು.
ಕರ್ನಾಟಕದ ಏಕೀಕರಣವೇ ಇವರ ಗುರಿಯಾಗಿದ್ದು,1922 ರಲ್ಲಿ "ಜಯಕರ್ನಾಟಕವೇ ನಮ್ಮ ಮಂತ್ರಘೋಷ" ಎಂಬ ಘೋಷಣೆಯೊಂದಿಗೆ "ಜಯ ಕರ್ನಾಟಕ " ಪತ್ರಿಕೆಯನ್ನು ಪ್ರಾರಂಭಿಸಿದರು. ಇದರಲ್ಲಿ ಸಾಹಿತ್ಯ, ಕಲೆ,ವಿಮರ್ಶೆ, ಧರ್ಮ,ತತ್ವಜ್ಞಾನ,ವಿಜ್ಞಾನ, ರಾಜಕಾರಣ,ಸಣ್ಣಕತೆ, ಕವಿತೆ ಮತ್ತು ಆರ್ಥಿಕ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಲೇಖನಗಳು ಪ್ರಕಟವಾಗುತ್ತಿದ್ದವು. ಇದಲ್ಲದೆ ವೆಂಕಟರಾಯರು ಹಲವು ಪತ್ರಿಕೆಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಕರ್ನಾಟಕ ಪತ್ರ,ಕರ್ನಾಟಕ ವೃತ್ತ,ಕನ್ನಡ ಕೇಸರಿ ಪತ್ರಿಕೆಗಳಿಗೆ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಸ್ವಲ್ಪದಿನ ಕರ್ಮವೀರ ಪತ್ರಿಕೆಯನ್ನು ನಡೆಸಿದರು.
ವೆಂಕಟರಾಯರು ತಮ್ಮ ಜೀವನದ ಅನುಭವಗಳ ಬಗ್ಗೆ " ಜೀವನ ಸ್ಮೃತಿ ಗಳು " ಎಂಬ ಆತ್ಮಚರಿತೆಯನ್ನು ಬರೆದಿದ್ದಾರೆ.
ವೆಂಕಟರಾಯರು ಕರ್ನಾಟಕತ್ವದ ಪರಿಕಲ್ಪನೆಯೊಂದಿಗೆ ರಾಷ್ಟ್ರಾಭಿಮಾನವೂ ಮಿಳಿತವಾಗಿತ್ತು." ಕರ್ನಾಟಕ್ಕಾಗಿ ಕೆಲಸ ಮಾಡುವಾಗ ನಾನು ರಾಷ್ಟ್ರೀಯತ್ವವನ್ನೆಂದೂ ಕಣ್ಮರೆ ಮಾಡಿಲ್ಲ.ನನಗೆ ಅವೆರಡರಲ್ಲಿ ವಿರೋಧವೇ ಕಾಣುವುದಿಲ್ಲ. ನನಗೆ ಕರ್ನಾಟಕ ಎಂದರೆ ಅದೊಂದು ಕಿರಣ ಕಾಜು (focusing lens) ಅದರೊಳಗಿನಿಂದ ನನಗೆ ಭರತಭೂಮಿಯೇ ಏಕೆ ಇಡೀ ವಿಶ್ವವೇ ಕಾಣುತ್ತದೆ.ವಿಶ್ವದ ಕಿರಣಗಳು ನನ್ನ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿವೆ,ಅಂತರ್ಯಾಮಿಯಾಗಿವೆ" ಎಂದು ಹೇಳಿರುವುದರಲ್ಲಿ ಅವರ ರಾಷ್ಟ್ರಾಭಿಮಾನವನ್ನು ಕಾಣಬಹುದು. ಕನ್ನಡಿಗರಲ್ಲಿ ಸ್ಫೂರ್ತಿ ತರಲು ಹಲವಾರು ಉತ್ಸವಗಳನ್ನು ನಡೆಸಿ ಕನ್ನಡ ಪ್ರಚಾರವನ್ನು ಮಾಡುತ್ತಿದ್ದರು.
ಹೀಗೆ ಕನ್ನಡ ನಾಡು ನುಡಿಗಾಗಿ ಇವರ ಆರು ದಶಕಗಳ ಹೋರಾಟದ ಫಲವಾಗಿ 1956 ನವೆಂಬರ್  1ರಂದು ಏಕೀಕೃತ ಕರ್ನಾಟಕ ಉದಯವಾಯಿತು. ವೆಂಕಟರಾಯರ ಕನಸು ನನಸಾಯಿತಾದರೂ ಕರ್ನಾಟಕ ಎಂದು ಕರೆಯಲಿಲ್ಲವೆಂದು ಬೇಸರವೂ ಆಯಿತು. ಆದರೂ " ಈಗ ಮೈಸೂರು ರಾಜ್ಯವೆಂದು ತಪ್ಪಾಗಿ ಹೆಸರಿಡಲ್ಪಟ್ಟ ಕರ್ನಾಟಕ ರಾಜ್ಯವು ಆಯುಷ್ಮಂತವಾಗಲಿ,ಆರೋಗ್ಯವಂತವಾಗಲಿ ಮತ್ತು ಭಾಗ್ಯವಂತವಾಗಲಿ ಎಂದು ಹರಸುತ್ತೇನೆ" ಎನ್ನುವುದನ್ನು  ನೋಡಿದರೆ ಅವರ ಕರ್ನಾಟಕದ ಮೇಲಿನ ಅಭಿಮಾನ ತಿಳಿಯುತ್ತದೆ.
ಕನ್ನಡ ನಾಡು ನುಡಿಗಾಗಿ ಅವಿರತವಾಗಿ ಸೇವೆ ಸಲ್ಲಿಸಿದ ವೆಂಕಟರಾಯರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ,ಗೌರವಿಸಿದವು.
1921 ರಲ್ಲಿ ಅಲಸೂರು ಪೇಟೆಯಲ್ಲಿ ಮಾನಪತ್ರದೊಂದಿಗೆ " ದೇಶಸೇವಾ ಧುರೀಣ ಮತ್ತು ಸ್ವಭಾಷಾ ರಕ್ಷಕ " ಎಂಬ ಬಿರುದನ್ನು ನೀಡಲಾಯಿತು.
1930 ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರನ್ನಾಗಿ ಮಾಡುವುದರ ಮೂಲಕ ಅವರ ಹೋರಾಟಕ್ಕೆ ಗೌರವ ತೋರಿಸಿದರು.
1941 ರಲ್ಲಿ ಹೈದರಾಬಾದಿನ ಕನ್ನಡಿಗರು " ಕರ್ನಾಟಕ ಕುಲ ಪುರೋಹಿತರು " ಎಂಬ ಬಿರುದು ನೀಡಿ ಸನ್ಮಾನಿಸಿದರು.
1961 ರಲ್ಲಿ ಬೆಂಗಳೂರು ನಗರಸಭೆ ಮಾನಪತ್ರ ನೀಡಿ ಸನ್ಮಾನಿಸಿತು.
ಹೀಗೆ ನಾಡಸೇವೆಯೊಂದಿಗೆ ದೇಶಸೇವೆಯನ್ನು ಮಾಡುತ್ತಾ ತಮ್ಮ ಜೀವಮಾನವಿಡೀ ಹೋರಾಡಿ ತನು ಮನ ಧನವನ್ನು ಅರ್ಪಿಸಿದ. ವೆಂಕಟರಾಯರು 1964 ಫೆಬ್ರವರಿ 25 ರಂದು ನಿಧನರಾದರು. " ಕರ್ನಾಟಕ ದೇವಿಯ ಮಂದಿರದಲ್ಲಿ ಉರಿಯುತ್ತಿರುವ ಹೂ ಬತ್ತಿ" ಎಂದ ವೆಂಕಟರಾಯರು ತಮ್ಮ ಅವಿರತ ಹಾಗೂ ನಿಸ್ವಾರ್ಥ ಸೇವೆಯಿಂದ ಎಲ್ಲರ ಮನದಲ್ಲಿ ನಂದಾದೀಪವಾಗಿದ್ದಾರೆ. ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವೆಂಕಟರಾಯರು " ಕನ್ನಡ ಕುಲದ ಪುರೋಹಿತ" ರೇ ಹೌದು.
- ವಿಜಯಲಕ್ಷ್ಮಿ ಎಂ ಎಸ್ 

Tuesday, 31 October 2017

ಚುಟುಕು


ಯೋಚನೆ ಒಳ್ಳೆಯ ದಿರಲಿ
ಮನಸ್ಸು ಶುದ್ಧವಿರಲಿ
ಗಮನ ಒಳ್ಳೆಯ ಕಡೆ ಇರಲಿ
ದಿನಗಳು ನಗುತ್ತಾ ಬರಲಿ
ನಮ್ಮ ಸಾಹಿತ್ಯ ವೇದಿಕೆ ವಾರವಾರವು ಸದಸ್ಯನಿಯರಿಂದ ತುಂಬುತ್ತಿರಲಿ,



ನಮ್ಮ ಮನೆಯಲ್ಲಿದೆ ಒಂದು ಬೆಕ್ಕು
ಅದು ಇದ್ದರೆ ನಮ್ಮ ಮನೆಗೆ ಲಕ್ಕು
ಹಾಲು ಕುಡಿದು ಹೆಚ್ಚಾಯಿತು ಸೊಕ್ಕು
ಅದಕ್ಕೆ ಓಡಿಸಿದೆ ನಕ್ಕು

   - ಅರುಣ ಎಂ

ಭಾಷಾ ಆಟಗಳು - 1


ಈ ಕೆಳಕಂಡ ಅಕ್ಷರಗಳನ್ನು ಸರಿಯಾಗಿ ಜೋಡಿಸಿ - - ಪ್ರಮೀಳ 

1. ಉ ಡ ದೇ ಸಿ ಣ ಹ ಬೇ ಯ

2, ಧ್ವ ತ್ರಿ ಸು ಏ ಜ ರ್ಣ ರಿ ವ

3, ಸ್ವ ನ  ನಾ  ಯಿ  ತಾ  ಡೇ  ಮ್ಮ ರ್ಗ

4, ಮೌ  ಮಾ ಗ ಯ ವೀ  ಲ್ಯ  ಳು  ನ

5, ನೈ  ಶಿ  ಪು  ಲ್ಪ ಕ ಣ್ಯ ಲಾ  ತೆ

6, ಮು ಗೆ  ಣ್ಣು ಕ್ಕ ಕ  ರು  ಣ್ಣ ಮು

7, ಮಿ  ನಂ  ರು  ಸ್ವಾ  ಕ ವೀ  ದ ವೇ

8,  ಗ ಣೆ   ಜೋ  ಳ ಕ್ಷ ಡ  ರ ಅ


9, ದೇ  ಕ ವಿ  ನ್ನ ಲ ಡ  ಕು  ದ

10, ಚೆ  ರು  ಕಿ  ರಾ  ಮ್ಮ ತ್ತು  ಣಿ   ನ್ನ


ಒಗಟುಗಳು (ಸಂಗ್ರಹ - ಬಿ ಪಾರ್ವತಿ)
1. ಹುಟ್ಟುತ್ತಲೇ ಹಸಿರು ಪಚ್ಚೆ ತಾನಲ್ಲ. ಬೆಳೆಯುತ್ತಲೇ ಕೆಂಪು ರತ್ನ ತಾನಲ್ಲ, ಮುಪ್ಪಿನ ಕಾಲಕ್ಕೆ ಕಪ್ಪು ಕಸ್ತೂರಿ ತಾನಲ್ಲ ಹಾಗಾದರೆ ನಾನಾರು?- 
2. ಕತ್ತಲಿನಲ್ಲಿ ಹಾರಾಟ, ಆಡುವೆ ನಾನು ತುಂಟಾಟ, ನೋಡುವೆ ನೀನು ಮಿನುಗಾಟ, ನಾನ್ಯಾರೆಂದು ಹೇಳುವಿಯಾದರೆ ಉಂಟು ನಿನಗೆ ಸವಿಯೂಟ - 
3. ಸಾಗರ ಪುತ್ರ ಸಾರಿನ ಮಿತ್ರ. – 
4. ಒಂಟಿ ಕಾಲಿನಲ್ಲಿ ಕೊಕ್ಕರೆಗೆ ನೂರಾರು ರೆಕ್ಕೆ ಉದುರಿದಂತೆಲ್ಲಾ ಬೆಳೆಯುತ್ತೆ ಮೇಲಕ್ಕೆ. - 


  

ಚೈತನ್ಯ ಚಿಲುಮೆ - ಫ್ರೆಡ್ ಹಾರ್ಟಮನ್


ಪ್ರಯತ್ನದ ಫಲ
ಯಾವುದೇ ಒಬ್ಬ ಮನುಷ್ಯ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು. ಅಂದರೆ ಮುಂದೆ ನಾನು ಹೀಗಾಗಬೇಕು ಅನ್ನೋ ಗಟ್ಟಿ ನಿಶ್ಚಯ ಮನಸ್ಸಿನಲ್ಲಿದ್ರೆ ಏನನ್ನಾದರೂ ಸಾಧಿಸಬಹುದು. ಇರಬೇಕು ಗುರಿಯನ್ನು ಇಟ್ಟುಕೊಳ್ಳುವುದರ ಜೊತೆಗೆ ಪ್ರಯತ್ನವು ಇರಬೇಕು. ಪ್ರಯತ್ನವಿದ್ದರೆ ಫಲ ಖಂಡಿತ ದೊರಕುತ್ತದೆ. ಹೀಗೆ ಪ್ರಯತ್ನ ಪಟ್ಟು ಸಾದಿಸಿದವರಲ್ಲಿ ಡೇವಿಡ್ ಮನ್ ಕೂಡ ಒಬ್ಬ.
       ಡೇವಿಡ್ ಹಾರ್ಟಮನ್ ಒಬ್ಬ ಕುರುಡ. ಅವನ ತಂದೆಯ ಹೆಸರು ಫ್ರೆಡ್ ಹಾರ್ಟಮನ್. ಅವನ ತಂದೆ ಒಬ್ಬ ಬ್ಯಾಂಕ್ ನೌಕರನಾಗಿದ್ದ. ಒಂದು ದಿನ ಡೇವಿಡ್ "ನಾನು ಬೇಸ್ ಬಾಲ್ ಡಬೇಕು.ಅಂತಿದೀನಿ ಆಡಬಹುದ"ಎಂದು ತನ್ನ ತಂದೆಯನ್ನು ಕೇಳಿದನು. ಅದಕ್ಕೆ ಅವನ ತಂದೆ "ಪ್ರಯತ್ನ ಪಡು ನೋಡೋಣ ಪ್ರಯತ್ನ ಪಡದಿದ್ದರೆ ಏನು ಅಂತ ಗೊತ್ತಾಗೋದಿಲ್ಲ ಪ್ರಯತ್ನ ಮಾಡು ನೀನು ಬೇಸ್ ಬಾಲ್ ಆಡುತ್ತೀಯ" ಎಂದು ಹೇಳಿದರು .ಆ ನಂತರ ಡೇವಿಡ್ ಬೇಸ್ ಬಾಲ್ ಆಡಿ ಕಲಿತನು.ಅವನ ತಂದೆ  ಕೂಡ ಅದಕ್ಕೆ ಪ್ರೋತ್ಸಾಹಿಸಿದರು.ಡೇವಿಡ್  ತನ್ನ ಕತ್ತಲ ಜಗತ್ತನ್ನು ಕಂಡು ಹೆದರಿ ಕೊಳ್ಳುತ್ತಿದ್ದನು.ಆಗ ಅವನ ಅಮ್ಮ ಬಂದು ಮಗನನ್ನು ತಬ್ಬಿಕೊಂಡು "ನಾನಿಲ್ಲಿದೀನಿ ಮಗು ,ನನಗೆ ಗೊತ್ತು ಕತ್ತಲ ಜಗತ್ತು ತುಂಬ ಹೆದರಿಕೆ ಉಂಟು ಮಾಡುತ್ತೆ.ನಿಲ್ಲೋದು ಕಷ್ಟ ಆಗುತ್ತೆ ,ಆದರೆ ನಾನು ಇಲ್ಲೆ ಇದೀನಿ "ಅಂತ ಧೈರ್ಯ ತುಂಬುತ್ತಿದ್ದಳು.ಆದರೆ ಅವನ ಅಕ್ಕ ಬಾರ್ಬರಾ ಆಗಲ್ಲ.ಡೇವಿಡ್ ಅವನ ಅಕ್ಕನನ್ನು ಏನಾದರೂ ತಂದುಕೊಡು ಎಂದು ಕೇಳಿದರೆ, "ಏ,ನಿನ್ನ ಕೆಲಸ ನೀನೆ ಮಾಡಿಕೊಳ್ಳುವುದನ್ನ ರೂಢಿ ಮಾಡ್ಕೋ ಯಾವಾಗಲೂ ನಿನ್ನ ಜೊತೆ ಯಾರಿರುತ್ತಾರೆ" ಎಂದು ಗದರಿಸುತ್ತಿದ್ದಳು.
            ತಂದೆ ಪ್ರಯತ್ನ ಪಡು ನೋಡೋಣ ಅನ್ನುತ್ತಿದ್ದರು. ತಾಯಿ ನಾನಿದೀನಿ ಮಗು ಅನ್ನುತ್ತಿದ್ದಳು.ಅಕ್ಕ ನಿನ್ನಕೆಲಸ ನೀನೆ ಮಾಡಿಕೊ ಅನ್ನುತ್ತಿದ್ದಳು.ಹೀಗೆ 3 ಜನರ ಮಧ್ಯ ಡೇವಿಡ್ ಬೆಳೆದನು.ಡೇವಿಡ್ ತನ್ನ ಚಿಕ್ಕ ವಯಸ್ಸಿನಿಂದಲೂ ತಾನು ಡಾಕ್ಟರ್ ಆಗಬೇಕು ಅಂದುಕೊಂಡಿದ್ದ.ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಅವನು ಕುರುಡರ ಶಾಲೆ ಬಿಟ್ಟು ಅದೇ ಊರಿನಲ್ಲಿರುವ ಶಾಲೆ ಸೇರಿಕೊಂಡನು. ಹಾಗೆ ಬೆಳಿತಾ ಬೆಳಿತಾ ತಾನು ಡಾಕ್ಟರ್ ಆಗಬೇಕು ಅನ್ನೋ ಹಠನೂ ಬೆಳೀತು.ಆದರೆ ಎರಡೂ ಕಣ್ಣು ಕಾಣದ ಕುರುಡ ಡಾಕ್ಟರ್ ಆಗೋದಕ್ಕೆ ಸಾಧ್ಯವಿಲ್ಲ ಅನ್ನೋದನ್ನ ಡೇವಿಡ್ ಗೆ ಹೇಳವು -ದು ಹೇಗೆ ಎಂದು ಮನೆಯವರೆಲ್ಲ ಕಂಗಾಲ -ದರು.ಆಗ ಅವನು ಸೇರಬೇಕಾದ ಕಾಲೇಜಿನ ಶಿಕ್ಷಕರಿಂದ ಹೇಳಿಸಿದರು. ಅದಕ್ಕೆ ಡೇವಿಡ್ ಹೇಳಿದ "ನೋಡಿ ನನಗೆ ಕಣ್ಣು ಕಾಣೋದಿಲ್ಲ ಅನ್ನೋದು ಬಿಟ್ಟರೆ ನಾನು ಬೇರೆಯವರಿಗಿಂತ ಕಡಿಮೆ ಇಲ್ಲ. ಎಲ್ಲರಿಗೂ ಒಂದಲ್ಲ ಒಂದು  ವೈಖಲ್ಯ ಇರುತ್ತೆ.ಜೀವನದಲ್ಲಿ ಏನನ್ನೂ ಸಾದಿಸದೆ,ವಿಶೇಷವಾಗಿ ಏನನ್ನೂ ಮಾಡದೆ ಇರುವವನೇ ಈ ಜಗತ್ತಿನ ನಿಜವಾದ ಅಂಗವಿಕಲ ಅಂತ ನಾನು ಭಾವಿಸಿದ್ದೇನೆ. ನಾನು ಒಬ್ಬ ಒಳ್ಳೆಯ ಮನೋರೋಗ ತಜ್ಞ ಆಗ್ತೀನಿ ಅಂತ ನನಗೆ ನಂಬಿಕೆ ಇದೆ. ದಯವಿಟ್ಟು ನನಗೆ ಕಾಲೇಜಿಗೆ ಅಡ್ಮಶನ್ ಕೊಡಿ"ಎಂದು ಕೇಳಿಕೊಂಡನು. ಆಗ ಅವನಿಗೆ ಕಾಲೇಜಿನಲ್ಲಿ ಅಡ್ಮಿಶನ್ ಸಿಕ್ಕಿತು. ಆ ಕಾಲೇಜಿನಲ್ಲಿ ನಾಲ್ಕು ವರ್ಷ ಓದಿ ನಿಜವಾದ ಪ್ರತಿಭಾವಂತ ವಿದ್ಯಾರ್ಥಿ ಅನ್ನಿಸಿಕೊಂಡ ಡೇವಿಡ್ ಎಲ್ಲರಿಗಿಂತ ಹೆಚ್ಚಿನ ಅಂಕಗಳನ್ನು ತೆಗೆದುಕೊಂಡನು.ಆದರೆ ಕುರುಡನಾದ ನನಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುತ್ತಾ ಅನ್ನೋ ಪ್ರಶ್ನೆ ಅವನನ್ನೂ ಕೂಡ ಕಾಡುತ್ತಿತ್ತು. 
          ಡೇವಿಡ್ ಹಾರ್ಟಮನ್ ಅಮೆರಿಕದ 10 ಮೆಡಿಕಲ್ ಕಾಲೇಜುಗಳಿಗೆ ಅರ್ಜಿ ಹಾಕಿದ್ದ.ಅದರಲ್ಲಿ 9 ಕಾಲೇಜುಗಳು ಅವನನ್ನ ತಿರಸ್ಕರಿಸಿದವು.ಆಗ ಡೇವಿಡ್ ನ ಕುರುಡು ಕಣ್ಣುಗಳಲ್ಲಿ ಮೊದಲ ಬಾರಿಗೆ ನಿರಾಶೆಯ ಕಣ್ಣೀರು ಸುರಿಯಿತು. ಎಲ್ಲಾ ಮುಗಿದು ಹೋಯಿತು ಅನ್ನೋ ಹಾಗೆ ಅತ್ತುಬಿಟ್ಟ
            ಅಮೆರಿಕಾದಲ್ಲಿ ಟೆಂಪಲ್ ಯುನಿವ -ರ್ ಸಿಟಿ ಆಫ್ ಮೆಡಿಶನ್ ಅನ್ನೋ ಸಂಸ್ಥೆ ಇತ್ತು. ಆ ಸಂಸ್ಥೆಯ ಅಸಿಸ್ಟೆಂಟ್ ಒಬ್ಬರು ಈ ಹುಡುಗನಿಗೆ ಒಂದು ಅವಕಾಶ ಕೊಡಬೇಕು ಅಂತ ವಾದಿಸಿದರು. ಅವತ್ತೇ ಮಧ್ಯಾಹ್ನ ಡೇವಿಡ್ ಅಕ್ಕ ಬಾರ್ಬರಾ ಅವನಿಗೆ ಫೋನ್ ಮಾಡಿ "ನೀನು ಸಾಧಿಸಿ ಬಿಟ್ಟೆ ಕಣೋ ನಿನಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಕ್ಕಿದೆ ಕಣೋ"ಎಂದು ತುಂಬ ಸಂತೋಷದಿಂದ ಹೇಳಿದಳು.ಆ ನಂತರ ಡೇವಿಡ್ ಹಾರ್ಟ್‍ಮನ್ ಕಷ್ಟಪಟ್ಟು ಮೆಡಿಕಲ್ ಓದಿದ.ರೋಗಿ ಗಳ ಬಾಯಿ ಕಣ್ಣು ಗಾಯಗಳನ್ನು ನೋಡೋಕೆ ಆಗುತ್ತಿರಲಿಲ್ಲ.ಅವರಿಗೆ ಪರೀಕ್ಷೆ ಮಾಡೋಕೆ ಆಗುತ್ತಿರಲಿಲ್ಲ.ಆದರೂ ಅವನ ಎದುರಿಗೆ ಕುಳಿತುಕೊಳ್ಳುತ್ತಿದ್ದ ರೋಗಿಗಳು ಅತ್ಯಂತ ಸ್ಪಷ್ಟವಾಗಿ ಅವನ ಮೇಲೆ ವಿಶ್ವಾಸ ಇಟ್ಟು ಅವನಿಗೆ ತಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು.ಡೇವಿಡ್ ಮೊದಲನೆಯ ರಾಂಕ ಪಡೆದು ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಿದ.
           ಒಂದು ದಿನ ಡೇವಿಡ್ ಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು.ಅವನಿಗೆ ತುಂಬ ಸಂತೋಷವಾಗಿತ್ತು.ಅಲ್ಲಿಯ ಪ್ರೊಫೆಸರ್ ಒಬ್ಬರು "ನಮ್ಮ ಡೇವಿಡ್ ಉಳಿದ ವಿದ್ಯಾರ್ಥಿಗಳಿಗಿಂತ ತುಂಬಾ ಡಿಫರೆಂಟ್ "ಅಂತ ಹೊಗಳಿದರು.ಅದಕ್ಕೆ ಡೇವಿಡ್ ಎದ್ದು ನಿಂತು "ಅಪ್ಪ ಹೇಳುತ್ತಿದ್ದುದು ನಿಜ ಅನ್ನಿಸುತ್ತೆ ಪ್ರಯತ್ನ ಪಟ್ಟು ನೋಡು ಪ್ರಯತ್ನ ಪಡೆದ ಹೊರತು ಅದು ಏನು ಅಂತ ಗೊತ್ತಾಗೋಲ್ಲ ಅಪ್ಪ ಹೇಳಿದ್ದು ಸರಿ"ಎಂದು ಹೇಳಿದನು.
            ಹೀಗೆ ಡೇವಿಡ್ ಪ್ರಯತ್ನ ಪಟ್ಟಿದ್ದಕ್ಕೆ ಡಾಕ್ಟರ್ ಆದ. ಅವನ ಪ್ರಯತ್ನಕ್ಕೆ ಪಲ ಸಿಕ್ಕಿತು ಸಾಧನೆ ಮಾಡಿದವರಿಗೆಲ್ಲಾ ಎಲ್ಲಾ ಅನುಕೂಲಗಳು ಇರುವುದಿಲ್ಲ. ಯಾವ ಅಡೆ ತಡೆಗಳು ಇದ್ದರೂ್ ಅದನ್ನು ನಿವಾರಿಸಿ ಮುನ್ನಡೆಯಬೇಕು. ಪ್ರಯತ್ನ ಪಟ್ಟು ಗುರಿ ಸೇರಬೇಕು.
                    
                       -- ಎ.ಆರ್.ಆಶಾ

ಲೇಖನ - ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ

     

"ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು" ಎನ್ನುವ ಮಾತು ಅಕ್ಷರಶಃ ಸತ್ಯ. ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅಪಾರ. ಮಗು ಹುಟ್ಟಿದ ದಿನದಿಂದಲೇ ಅಂದರೆ ತೊದಲು ನುಡಿಯುವುದರಿಂದ ಆರಂಭಿಸಿ ಮೊದಲ ಹೆಜ್ಜೆ ಇಡುವುದನ್ನು ಕಲಿಸಿಕೊಡುತ್ತಾಳೆ. ಮಾತು ಪ್ರಾರಂಬಿಸಿದಾಗಲೇ ಸಂಬಂಧಗಳ ಬಗ್ಗೆ ಅರಿವನ್ನು ಮೂಡಿಸುತ್ತಾಳೆ. ಅಂದರೆ ಅಪ್ಪ, ಅಜ್ಜಿ, ತಾತ, ಚಿಕ್ಕಪ್ಪ, ದೊಡ್ಡಪ್ಪ ಇತ್ಯಾದಿ. ಮಗುವಿನ ಬೆಳವಣಿಗೆಗೆ ತಂದೆ, ತಾಯಿಯ ಹಾಗು ಕುಟುಂಬಸ್ಥರ ನಡುವಳಿಕೆ ಬಹುಮುಖ್ಯ. ಆ ನಡವಳಿಕೆಯನ್ನೇ ಮಗು ಅನುಕರಿಸುತ್ತದೆ. ಆದ್ದರಿಂದ ತಾಯಿಯಾದವಳು ಕುಟುಂಬದ ಸದಸ್ಯರಿಗೆಲ್ಲಾ ಅರಿವನ್ನು ಮೂಡಿಸಿ ಮಗುವಿನ ಸಕಾರಾತ್ಮಕ ಬೆಳವಣಿಗೆಗೆ ಕಾರಣಳಾಗುವಳು. ಈ ದಿನಗಳಲ್ಲಿ ವಿಭಕ್ತ ಕುಟುಂಬಗಳು ಹಾಗು ಒಂದೇ ಮಗು ಇರುವ ಕುಟುಂಬಗಳಲ್ಲಿ ತಾಯಿಯು ಮಕ್ಕಳಿಗೆ ಗೆಳತಿಯಾಗಿಯೂ, ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾಳೆ. 
ತಾಯಿಯಾದವಳು ಅಡುಗೆ ಮಾಡಿ ಬಡಿಸುವಳು ಹೌದು, ಚಂದಕೆ ಸಾಕುವಳು ಹೌದು, ಜೊತೆಗೆ ಅವಳು ನಿರ್ವಹಿಸುವ ಕೆಲಸಗಳು ಒಂದೆರಡಲ್ಲ, ಅಮ್ಮನೆಂದರೆ ಹಾಗೆಯೇ ನಿಜ. ಹಸಿವಾಗಿ ಹೊಟ್ಟೆ ಚುರುಗುಟ್ಟುವಾಗ ನೆನಪಾಗುವಳು ಅಮ್ಮ, ಆಡುವಾಗ ನೆಲಕ್ಕೆ ಬಿದ್ದು ಗಾಯಮಾಡಿಕೊಂಡಾಗಲು ಮೂಡುವ ಉದ್ಗಾರ ಅಮ್ಮ, ಭಯವಾದರೆ ಅಪ್ಪಿ ಸಂತೈಸುವಳು, ಅಳು ಬಂದರೆ ಕಣ್ಣೊರೆಸುವವಳು ಅವಳೇ, ಅಮ್ಮ ಇಷ್ಟೆಲ್ಲಾ ಕೆಲಸ ಮಾಡುತ್ತಾಳೆ. ಇದರ ಜೊತೆಗೆ ತುತ್ತು ಅನ್ನ ನೀಡುವವಳು, ಆರೋಗ್ಯದ ಅಂಕೆ ತಪ್ಪಿದಾಗ ಆರೈಕೆ ಮಾಡುವವಳು ಅವಳೇ. ಹೀಗೆ ಅಮ್ಮನ ಪಾತ್ರ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ.
     ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿಯ ಪಾತ್ರವೇ ಹಿರಿದು. ತಾಯಿಯು ಮಕ್ಕಳು ದೂರದರ್ಶನವನ್ನು ಹೆಚ್ಚು ನೋಡದಂತೆ ತಡೆದು, ಶಿಕ್ಷಣದ ಕಡೆಗೆ ಅವರ ಆಸಕ್ತಿಯನ್ನು ಬೆಳೆಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ, ಹಾಗೆಯೇ ಮಕ್ಕಳು ಓದಲು ಮೂಗು ಮುರಿದರೆ ಅವರಿಗೆ ಭವಿಷ್ಯದ ಚಿಂತನೆಯನ್ನು ತಿಳಿಸಿ ಅವರ ವ್ಯಕ್ತಿತ್ವ ರೂಪಿಸುವದರಲ್ಲಿ ಸಹಕಾರಿಯಾಗುತ್ತಾಳೆ. ಕೆಲವೊಮ್ಮೆ ಅಮ್ಮನು ಪೋಲೀಸ್ ತರಹ ವರ್ತಿಸಬೇಕಾಗುತ್ತದೆ, ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೋ ಎಂದು ಅವರನ್ನು ಹಿಂಬಾಲಿಸುವುದು, ಮೊಬೈಲ್ ಪರಿಶೀಲಿಸುವುದು, ಆಗೊಮ್ಮೆ ಈಗೊಮ್ಮೆ ಮಕ್ಕಳ ಕೋಣೆಯಲ್ಲಿ ಸುಳಿದಾಡುವುದರ ಮೂಲಕ ಮಕ್ಕಳು ಹಾದಿ ತಪ್ಪಿ ನಡೆಯುವುದನ್ನು ತಡೆಯುವವಳು ಅಮ್ಮನೇ.
          ಇಷ್ಟೆಲ್ಲಾ ಆರೈಕೆಯೊಂದಿಗೆ ಉತ್ತಮ ಜ್ಞಾನ, ಸಂಸ್ಕಾರ, ಕುಟುಂಬದ ಸಂಬಂಧಗಳ ಅನುಬಂಧವನ್ನು ಸಾಕ್ಷಾತ್ಕರಿಸುವ ವಿಶೇಷ ಶಕ್ತಿ ತಾಯಿಯಲ್ಲಿದೆ. ಇತರರೊಂದಿಗೆ ಹೋಲಿಕೆಗೆ ಆಸ್ಪದ ಕೊಡದೆ, ಪ್ರಾರ್ಥನೆ, ದೇಶಪ್ರೇಮ, ಪರಸ್ಪರ ಸಹಕಾರ, ಪ್ರೀತಿ, ಕೊಡುವ ಗುಣ, ಉಪಕಾರ ಸ್ಮರಣೆ ಮೊದಲಾದ ಮೌಲ್ಯಗಳೊಂದಿಗೆ ಮಕ್ಕಳ ನೈಜ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ಅವಳಲ್ಲಿದೆ.
       ತನ್ನ ಮಕ್ಕಳು ವಿದ್ಯಾವಂತರಾಗಿ ಉನ್ನತ ಸ್ಥಾನದಲ್ಲಿದ್ದು ತಮಗೆ ಹಿಂದೆ ಅಮ್ಮ ಹೇಳಿದ ಕಥೆ, ನೀತಿ ಪಾಠಗಳೇ  ಇಂದು ತಮ್ಮನ್ನು ಇಂತಹ ಉನ್ನತ ಮಟ್ಟದಲ್ಲಿ ನಿಲ್ಲಿಸಿದೆ ಎಂದಾಗ ತಾಯಿಗಾಗುವ ಆನಂದ ಅಷ್ಟಿಷ್ಟಲ್ಲ. ಹೀಗೆ ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ತಾಯಿಯ ಪಾತ್ರ ಅಪಾರ. ******
– ಅನುಪಮ ಪಿ

ನಗೆ ಬರಹ - ನಾನೂ ಬರೆದೆ


ಏನಾದ್ರೂ ಬರೆದು ನನ್ನ ಹೆಸರು ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನ ನೋಡಬೇಕೆನ್ನೋ ಆಸೆ ನೆರವೇರಿಸಿಕೊಳ್ಳಲು ಸುಮಾರು ಪ್ರಯತ್ನ ಮಾಡುತ್ತಲೇ ಇದ್ದೆ. ಆದ್ರೆ ಯತ್ನ ಫಲ ನೀಡುವ ಸೂಚನೆ ಕಾಣದೆ ಹೋದಾಗ ಖಂಡಿತ ನಿರಾಸೆ ಹೊಂದಲಿಲ್ಲ. ಎರಡು ದೊಡ್ಡ ಫ್ಲಾಸ್ಕ್ ತುಂಬಾ ಕಾಫಿ, ಒಂದಷ್ಟು ಕಡ್ಲೆಪುರಿ, ಕುಡಿಯಲು ನೀರು ಇಟ್ಕೊಂಡೆ.
ಎಲ್ಲಾ ರೆಡಿಯಾಯ್ತು....ಆದ್ರೆ ಬರೆಯೋದಕ್ಕೆ ಏನೂ ಹೊಳೆಯದಾಯ್ತು. ಪತ್ರಿಕೆಯೊಂದರಲ್ಲಿ ಸಾಹಸಪ್ರಧಾನ ಕಾದಂಬರಿಯೊಂದನ್ನ ಬರೆವಂತೆ ಹೇಳಿದ್ರು. ಇನ್ನೇನು ಬೇಕು, ಶುರು ಮಾಡಿಯೇ ಬಿಟ್ಟೆ. ತಲೆಯಲ್ಲಿ ವಿಷಯ ಓಡ್ತಿತ್ತು. ಪೆನ್ನೋ ಕೈ ಕೊಟ್ಟಿತ್ತು .
ಮತ್ತೊಮ್ಮೆ ಸಾಕಷ್ಟು ಪೆನ್ನು, ಹಾಳೆಗಳನ್ನ ಇಟ್ಕೊಂಡು ಏನಾದ್ರೂ ಬರೆಯಲೇಬೇಕಂತ ಕುಳಿತೆ. ಸಾಕಷ್ಟು ಯತ್ನದ ಕೊನೆಗೆ ಚುಟುಕವೊಂದನ್ನು ಬರೆದೆ. ಅದನ್ನು 'ಕ ಬು' ಎಂಬ ಹೊಸ ಪತ್ರಿಕೆಗೆ ಕಳಿಸಿದಾಗ ಪ್ರಪಂಚ ಗೆದ್ದಷ್ಟೇ ಖುಷಿಯಾಗಿತ್ತು. ತಿಂಗಳು, ವರ್ಷಗಳಾದರೂ ನನ್ನ ಬರಹ ಪ್ರಕಟವಾಗಲೇ ಇಲ್ಲ .
ಮದುವೆಯಾಗಿ 'ಮಕ್ಕಳಾಗಿ - ಮೊಮ್ಮಕ್ಕಳಾದರೂ ನನ್ನ ಬರೆವ ಬಯಕೆ ಬತ್ತಲಿಲ್ಲ. ಹನಿ ಮಿನಿ ಕವನವೊಂದನ್ನು ಹೊಸ ತ್ರೈಮಾಸಿಕ ಪತ್ರಿಕೆಯೊಂದಕ್ಕೆ ಕಳಿಸಿದೆ .
"ಮೇಲೆ ನೋಡು ಚಂದ್ರ ಬಿಂಬ 
ಕೆಳಗೆ ನೋಡು ಲೈಟ್ ಕಂಬ 
ನೀರಿನಲ್ಲಿ ಯಾರ ಬಿಂಬ 
ಕೈಯಲ್ಲಿದೆ ತಾಮ್ರದ ಚಂಬ."
ಇತ್ತೀಚೆಗಷ್ಟೇ ತಿಳಿದದ್ದು. ”ಅಸ್ವೀಕೃತ" ಪತ್ರಿಕೆ ನನ್ನ ಬರಹ ಪ್ರಕಟಿಸುವ ಮುನ್ನವೇ ನಷ್ಟವಾಗಿ ಬಾಗಿಲು ಮುಚ್ಚಿ, ಆ ಜಾಗದಲ್ಲಿ ಗುಜರಿ ಅಂಗಡಿ ಸ್ಥಾಪನೆಯಾಗಿದೆ ಅಂತ. 
ಇದೆಲ್ಲಾ ಆಗಿ ತಿಂಗಳೇ ಕಳೆದಿತ್ತು. ಅದೊಂದು ದಿನ ಲೇಖಕಿ ಟಿ ಸುನಂದಮ್ಮನವರ ಹಾಸ್ಯ ಬರಹವೊಂದನ್ನು ಓದುತ್ತ ಓದುತ್ತ ನಗುವುದರಲ್ಲೇ ತಲ್ಲೀನಳಾಗಿದ್ದಾಗ, ಮುಖದ ಮುಂದೆ ಅಡ್ಡ ಬಂದಿತು ಬಣ್ಣಬಣ್ಣದ ಪತ್ರಿಕೆ. "ಏ, ಛೆ" ಎಂದು ರೇಗುತ್ತಾ ತಲೆಯೆತ್ತಿದರೆ, ಅದೇ ತಾನೇ ಪತ್ರಿಕೋದ್ಯಮ ಮುಗಿಸಿ  ಅಪ್ರಕಟಿತ ಬರಹಗಳ ಪ್ರಕಟಿಸುವ "ಬರಹ" ಪತ್ರಿಕೆಯ ಸಹಸಂಪಾದಕಿಯಾಗಿದ್ದ ಮೊಮ್ಮಗಳು ತನುಜಾ ನನ್ನ ಬರಹ ಪ್ರಕಟಿಸಿ ತುಂಟನಗೆ ನಗುತ್ತಾ ನಿಂತಿದ್ದಾಳೆ. ನಿಜ ಹೇಳಬೇಕೆಂದರೆ ಅಂದು ಮೂಡಿದ ನಗೆ ಇಂದೂ ನನ್ನ ಮುಖದಲ್ಲಿ ಮಾಸಿಲ್ಲ!!
– ಕಾತ್ಯಾಯಿನಿ ಪಿ