ಏನಾದ್ರೂ ಬರೆದು ನನ್ನ ಹೆಸರು ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನ ನೋಡಬೇಕೆನ್ನೋ ಆಸೆ ನೆರವೇರಿಸಿಕೊಳ್ಳಲು ಸುಮಾರು ಪ್ರಯತ್ನ ಮಾಡುತ್ತಲೇ ಇದ್ದೆ. ಆದ್ರೆ ಯತ್ನ ಫಲ ನೀಡುವ ಸೂಚನೆ ಕಾಣದೆ ಹೋದಾಗ ಖಂಡಿತ ನಿರಾಸೆ ಹೊಂದಲಿಲ್ಲ. ಎರಡು ದೊಡ್ಡ ಫ್ಲಾಸ್ಕ್ ತುಂಬಾ ಕಾಫಿ, ಒಂದಷ್ಟು ಕಡ್ಲೆಪುರಿ, ಕುಡಿಯಲು ನೀರು ಇಟ್ಕೊಂಡೆ.
ಎಲ್ಲಾ ರೆಡಿಯಾಯ್ತು....ಆದ್ರೆ ಬರೆಯೋದಕ್ಕೆ ಏನೂ ಹೊಳೆಯದಾಯ್ತು. ಪತ್ರಿಕೆಯೊಂದರಲ್ಲಿ ಸಾಹಸಪ್ರಧಾನ ಕಾದಂಬರಿಯೊಂದನ್ನ ಬರೆವಂತೆ ಹೇಳಿದ್ರು. ಇನ್ನೇನು ಬೇಕು, ಶುರು ಮಾಡಿಯೇ ಬಿಟ್ಟೆ. ತಲೆಯಲ್ಲಿ ವಿಷಯ ಓಡ್ತಿತ್ತು. ಪೆನ್ನೋ ಕೈ ಕೊಟ್ಟಿತ್ತು .
ಮತ್ತೊಮ್ಮೆ ಸಾಕಷ್ಟು ಪೆನ್ನು, ಹಾಳೆಗಳನ್ನ ಇಟ್ಕೊಂಡು ಏನಾದ್ರೂ ಬರೆಯಲೇಬೇಕಂತ ಕುಳಿತೆ. ಸಾಕಷ್ಟು ಯತ್ನದ ಕೊನೆಗೆ ಚುಟುಕವೊಂದನ್ನು ಬರೆದೆ. ಅದನ್ನು 'ಕ ಬು' ಎಂಬ ಹೊಸ ಪತ್ರಿಕೆಗೆ ಕಳಿಸಿದಾಗ ಪ್ರಪಂಚ ಗೆದ್ದಷ್ಟೇ ಖುಷಿಯಾಗಿತ್ತು. ತಿಂಗಳು, ವರ್ಷಗಳಾದರೂ ನನ್ನ ಬರಹ ಪ್ರಕಟವಾಗಲೇ ಇಲ್ಲ .
ಮದುವೆಯಾಗಿ 'ಮಕ್ಕಳಾಗಿ - ಮೊಮ್ಮಕ್ಕಳಾದರೂ ನನ್ನ ಬರೆವ ಬಯಕೆ ಬತ್ತಲಿಲ್ಲ. ಹನಿ ಮಿನಿ ಕವನವೊಂದನ್ನು ಹೊಸ ತ್ರೈಮಾಸಿಕ ಪತ್ರಿಕೆಯೊಂದಕ್ಕೆ ಕಳಿಸಿದೆ .
"ಮೇಲೆ ನೋಡು ಚಂದ್ರ ಬಿಂಬ
ಕೆಳಗೆ ನೋಡು ಲೈಟ್ ಕಂಬ
ನೀರಿನಲ್ಲಿ ಯಾರ ಬಿಂಬ
ಕೈಯಲ್ಲಿದೆ ತಾಮ್ರದ ಚಂಬ."
ಇತ್ತೀಚೆಗಷ್ಟೇ ತಿಳಿದದ್ದು. ”ಅಸ್ವೀಕೃತ" ಪತ್ರಿಕೆ ನನ್ನ ಬರಹ ಪ್ರಕಟಿಸುವ ಮುನ್ನವೇ ನಷ್ಟವಾಗಿ ಬಾಗಿಲು ಮುಚ್ಚಿ, ಆ ಜಾಗದಲ್ಲಿ ಗುಜರಿ ಅಂಗಡಿ ಸ್ಥಾಪನೆಯಾಗಿದೆ ಅಂತ.
ಇದೆಲ್ಲಾ ಆಗಿ ತಿಂಗಳೇ ಕಳೆದಿತ್ತು. ಅದೊಂದು ದಿನ ಲೇಖಕಿ ಟಿ ಸುನಂದಮ್ಮನವರ ಹಾಸ್ಯ ಬರಹವೊಂದನ್ನು ಓದುತ್ತ ಓದುತ್ತ ನಗುವುದರಲ್ಲೇ ತಲ್ಲೀನಳಾಗಿದ್ದಾಗ, ಮುಖದ ಮುಂದೆ ಅಡ್ಡ ಬಂದಿತು ಬಣ್ಣಬಣ್ಣದ ಪತ್ರಿಕೆ. "ಏ, ಛೆ" ಎಂದು ರೇಗುತ್ತಾ ತಲೆಯೆತ್ತಿದರೆ, ಅದೇ ತಾನೇ ಪತ್ರಿಕೋದ್ಯಮ ಮುಗಿಸಿ ಅಪ್ರಕಟಿತ ಬರಹಗಳ ಪ್ರಕಟಿಸುವ "ಬರಹ" ಪತ್ರಿಕೆಯ ಸಹಸಂಪಾದಕಿಯಾಗಿದ್ದ ಮೊಮ್ಮಗಳು ತನುಜಾ ನನ್ನ ಬರಹ ಪ್ರಕಟಿಸಿ ತುಂಟನಗೆ ನಗುತ್ತಾ ನಿಂತಿದ್ದಾಳೆ. ನಿಜ ಹೇಳಬೇಕೆಂದರೆ ಅಂದು ಮೂಡಿದ ನಗೆ ಇಂದೂ ನನ್ನ ಮುಖದಲ್ಲಿ ಮಾಸಿಲ್ಲ!!
– ಕಾತ್ಯಾಯಿನಿ ಪಿ
No comments:
Post a Comment