ನಲ್ಲೂರು ಎಂಬ ಸಣ್ಣ ಗ್ರಾಮದಲ್ಲಿ ಬಡತನವನ್ನೇ ಹಾಸು ಹೊದ್ದುಕೊಂಡಿದ್ದ ಒಂದು ಬಡಬ್ರಾಹ್ಮಣ ಕುಟುಂಬ ವಾಸವಾಗಿತ್ತು. ಗ್ರಾಮದ ಆಂಜನೇಯ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದು ಜೊತೆಗೆ ಪುರೋಹಿತಿಕೆಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡು ಮಗ ಇದ್ದರು.ದಂಪತಿಗಳು ತಮ್ಮ ಮಕ್ಕಳನ್ನು ಸಲಹುವ ಸಲುವಾಗಿ ಸಣ್ಣ ಪ್ರಮಾಣದಲ್ಲಿ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮಾಡಿ ಮಾರುವ ವ್ಯವಹಾರವನ್ನು ಪ್ರಾರಂಭಿಸಿ ,ತಮ್ಮಂತೇ ತಮ್ಮ ಮಕ್ಕಳು ಜೀವನದಲ್ಲಿ ಎಂದೂ ಕಷ್ಟಪಡಬಾರದೆಂದು ಶ್ರಮಿಸುತ್ತಿದ್ದರು.
ಮುಂದೆ ಮೂರು ಮಕ್ಕಳು ಶಾಲೆಯಲ್ಲಿ ಆಟ ,ಪಾಠಗಳಲ್ಲಿ ಚುರುಕಾಗಿ ಉತ್ತಮ ಅಂಕಗಳನ್ನು ಪಡೆದು ಪಿ.ಯು.ಸಿ. ಶಿಕ್ಷಣವನ್ನು ಪಡೆದರು. ಕಲಿಕೆಯಲ್ಲಿ ಜಾಣ್ಮೆ ಪ್ರತಿಭೆಯನ್ನು ಮೈಗೂಡಿಸಿಕೊಂಡು,ಕಾಲೇಜಿನ ಸ್ಕಾಲರ್ ಶಿಪ್ ನ ಸಹಾಯದಿಂದ ಅಕ್ಕ-ತಂಗಿಯರಿಬ್ಬರು ಬಿ.ಇ.ಪದವಿಯನ್ನು ಪಡೆದು, ಸಾಫ್ಟವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಜೊತೆಗೆ ಮನೆಯಲ್ಲಿನ ಸರ್ವ ಕಷ್ಟಗಳಿಗೂ ಬೆನ್ನೆಲುಬಾಗಿ ನಿಂತು ಒಡಹುಟ್ಟಿದ ತಮ್ಮನ ವಿದ್ಯಾಭ್ಯಾಸಕ್ಕೆ ಕೈಜೋಡಿಸಿದರು. ಮುಂದೆ ತಮ್ಮ ಒಬ್ಬ ಉತ್ತಮ ಐ.ಎ.ಎಸ್ ಅಧಿಕಾರಿಯಾಗಲು ಎಲ್ಲಾ ರೀತಿಯ ನೆರವು ನೀಡಿದರು.
ಹೀಗೆ ಜೀವನ ಸಾಗುತ್ತಿದ್ದಾಗ ವಯಸ್ಸಾದ ತಂದೆ-ತಾಯಿಗಳು ಅನಾರೋಗ್ಯ ಪೀಡಿತರಾದಾಗ, ಮಕ್ಕಳು ತಂದೆತಾಯಿಗೆ ಉತ್ತಮ ಸೌಲಭ್ಯವುಳ್ಳ ಆಸ್ಪತ್ರೆಯಲ್ಲಿ ಔಷಧೋಪಚಾರವನ್ನು ಕೊಡಿಸಿದರು. ಪಟ್ಟಣದಲ್ಲಿದ್ದ ಮಕ್ಕಳು ತಂದೆ-ತಾಯಿಯನ್ನು ತಮ್ಮೊಡನೆ ಇರುವಂತೆ ಕರೆದರೂ ಸಹ ಸ್ವಾಭಿಮಾನಿಯಾದ ದಂಪತಿಗಳು ತಮ್ಮ ಗ್ರಾಮವನ್ನು ಬಿಡದೆ ಅಲ್ಲಿಯೇ ನೆಲಸಿ, ತಮ್ಮ ಕೈಲಾದ ಕೆಲಸಗಳನ್ನು ಮಾಡಿಕೊಂಡು, ಯಾರ ಹಂಗಿಗೂ ಬೀಳದೆ ಜೀವನ ನಿರ್ವಹಿಸುತ್ತಿದ್ದರು. ಹೀಗೆ ಯಾರಿಗೂ ಕೇಡನ್ನು ಬಯಸದೆ, ಊರಿನ ಜನರ ಪ್ರೀತಿಗೆ ಪಾತ್ರರಾಗಿದ್ದು ಬದುಕನ್ನು ನಿರ್ವಹಿಸುತ್ತಿದ್ದರು. ***
- ನಾಗಮಣಿ
No comments:
Post a Comment