ದಿನಾಂಕ 10-09-2015ರಂದು 9 ಸದಸ್ಯೆಯರೊಂದಿಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಆರಂಭಗೊಂಡ ಮುಕ್ತ ಸಾಹಿತ್ಯ ವೇದಿಕೆ ಸಾಹಿತ್ಯಾಸಕ್ತರಿಗೆ ಒಂದು ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ. ಅಂದು ಡಾ. ಜಿ. ಸುಧಾರವರ ಮುಂದಾಳತ್ವದಲ್ಲಿ ವೇದಿಕೆ ಆರಂಭವಾಯಿತು.
ಆರಂಭದಲ್ಲಿ 15 ದಿನಗಳಿಗೊಮ್ಮೆ ಶ್ರೀಮತಿ ಪುಣ್ಯವತಿ ಪ್ರಕಾಶ್‍ರವರ ಮನೆಯಲ್ಲಿ ಸಂಜೆ 4 ಘಂಟೆಯಿಂದ 6 ಘಂಟೆಯವರೆಗೆ ಸಭೆ ಸೇರಲು ನಿರ್ಧರಿಸಲಾಯಿತು. ಸಭೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳಾದ ಭಾಷಾ ಆಟ, ಲೇಖಕಿಯರ ಪರಿಚಯ, ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ಮುಂತಾದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಯಿತು.
ಸದಸ್ಯೆಯರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಎಲ್ಲರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯುತ್ತಲೇ ಸಾಗಿತು. ಎಲ್ಲರ ಉತ್ಸುಕತೆ, ಆಸಕ್ತಿಯನ್ನು ಗಮನಿಸಿ ಸಭೆಯನ್ನು ಪ್ರತಿ ಗುರುವಾರ ಮಾಡಲು ತೀರ್ಮಾನಿಸಲಾಯಿತು.
ವೇದಿಕೆಯ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಲು ಪ್ರತಿ ೬ ತಿಂಗಳಿಗೆ ಒಂದು ಸಮಿತಿಯನ್ನು ರಚಿಸಬೇಕೆಂದು ತೀರ್ಮಾನಿಸಲಾಯಿತು. ಮೊದಲ ಸಮಿತಿಯಲ್ಲಿ ಕಾತ್ಯಾಯನಿ ಸಂಚಾಲಕರಾಗಿ, ಅರುಣ ಖಜಾಂಚಿಯಾಗಿ ಆಯ್ಕೆಯಾದರು.
ನಂಜನಗೂಡು ತಿರುಮಲಾಂಬ, ಕೊಡಗಿನ ಗೌರಮ್ಮ, ತ್ರಿವೇಣಿ, ಅನುಪಮ ನಿರಂಜನ, ಜಯದೇವಿತಾಯಿ ಲಿಗಾಡೆ, ಮುಂತಾದ ಲೇಖಕಿಯರ ಪರಿಚಯ ಮಾಡಿಕೊಡಲಾಯಿತು.
ಭಾಷಾ ಆಟಕ್ಕಾಗಿ ಇಬ್ಬಿಬ್ಬರು ಸದಸ್ಯೆಯರ ಗುಂಪನ್ನು ರಚಿಸಿ, ಆ ತಂಡಗಳಿಗೆ ಮಹಿಳಾ ಲೇಖಕಿಯರ ಹೆಸರನ್ನು ಇಡಲಾಯಿತು. ಭಾಷಾ ಆಟಗಳಲ್ಲಿ ಎಲ್ಲರಿಗೂ ಬಹುಮಾನ ಬರುವಂತಹ ಯೋಜನೆಯನ್ನು ರೂಪಿಸಲಾಯಿತು. ಪ್ರತಿ ವಾರ ಒಂದು ತಂಡ ಆಟವಾಡಿಸಿ, ಬಹುಮಾನ ವಿತರಿಸಿಕೊಂಡು ಬರುತ್ತಿದೆ.
ಪ್ರತಿವಾರ ಸಭೆ ಸೇರಿದಾಗ ನಡೆಸುವ ಪ್ರಸಕ್ತ ವಿದ್ಯಮಾನಗಳ ಕುರಿತಾದ, ಮಹಿಳೆಯರ ಕುರಿತಾದ ಚರ್ಚೆಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದಾರೆ. ಮೂಢನಂಬಿಕೆ, ಸ್ತ್ರೀಭ್ರೂಣಹತ್ಯೆ, ಬಾಲ್ಯವಿವಾಹ, ವರದಕ್ಷಿಣೆ, ಮರುಮದುವೆ, ಸ್ವಕರುಣೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಕೆಲವು ವಿಷಯಗಳನ್ನು ಚರ್ಚಿಸುವಾಗ ಸಂತೋಷ, ದುಃಖ, ತಲ್ಲಣ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಂಡು, ನಮ್ಮ ವೇದಿಕೆಗಿರುವ “ಮುಕ್ತ” ಎಂಬ ಪದವನ್ನು ಸಾರ್ಥಕಗೊಳಿಸಿದ್ದಾರೆ.
ದಿನಾಂಕ 16-01-2015ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕನ್ನಡದ, ಕನ್ನಡಿಗರ ಸ್ಥಿತಿಗತಿ, ಕನ್ನಡ ನಾಡುನುಡಿ ಇತ್ಯಾದಿಗಳ ಬಗ್ಗೆ ಸದಸ್ಯೆಯರು ತಿಳಿಸಿಕೊಟ್ಟರು. ಅಂತ್ಯಾಕ್ಷರಿ, ಕನ್ನಡದ ಬಗೆಗಿನ ಗೀತಗಾಯನ ಸಹ ಇತ್ತು.
ದಿನಾಂಕ 21-01-2016ರಂದು ಚುಟಕ ಬರೆಯುವುದು ಹೇಗೆ ಎಂಬುದರ ಬಗ್ಗೆ ಡಾ. ಜಿ ಸುಧಾರವರು ಕಾರ್ಯಾಗಾರ ನಡೆಸಿಕೊಟ್ಟರು. ಕೆಲವು ಪದಗಳನ್ನು ಕೊಟ್ಟು ಅಲ್ಲಿಯೇ ಚುಟಕ ರಚಿಸಲು ಹೇಳಿದರು. ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ, ರಚಿಸಿ, ವಾಚಿಸಿದರು. ಈಗ ಅದನ್ನೇ ಹವ್ಯಾಸವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ದಿನಾಂಕ 12 – 03 – 2016 ರಂದು “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಆರಂಭಕ್ಕೆ ಕಾರಣರಾದವರ ಬಗ್ಗೆ, ಮಹಿಳಾ ಚಳುವಳಿ ಬೆಳೆದು ಬಂದ ಬಗ್ಗೆ ವಿವರಿಸಲಾಯಿತು. ನಂತರ ರಸಪ್ರಶ್ನೆ ಕಾರ್ಯಕ್ರಮ, ನೃತ್ಯ, ಸ್ವರಚಿತ ಕವನ ವಾಚನ, ನಡೆದವು. ಅಂದು ಸದಸ್ಯೆಯರೇ ಅಡುಗೆ ಮಾಡಿಕೊಂಡು ಬಂದು ಎಲ್ಲರೂ ಒಟ್ಟಾಗಿ ಆಹಾರ ಸೇವಿಸಿದರು.
ಆಂದು ಆರಂಭವಾದ ಕೈಯಡುಗೆಯ ರುಚಿ, ವೇದಿಕೆ ಆಚರಿಸುವ ಎಲ್ಲಾ ಸಮಾರಂಭದಲ್ಲೂ ತನ್ನ ಸ್ವಾದವನ್ನು ಉಳಿಸಿಕೊಂಡು ಬರುತ್ತಿದೆ.
ದಿನಾಂಕ 14-04-2016ರಂದು “ಕೊಡಗಿನ ಗೌರಮ್ಮನವರ ಜನ್ಮದಿನ”ವನ್ನು ಆಚರಿಸಲಾಯಿತು. ಅವರ ಜೀವನ ಮತ್ತು ಸಾಧನೆ ಬಗ್ಗೆ ತಿಳಿಸಿಕೊಡಲಾಯಿತು. ಅವರ ಜೀವನದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಇತ್ತು. ನಂತರ ಸದಸ್ಯೆಯರು ಸ್ವರಚಿತ ಕವನ ಓದಿದರು. ಅಂದು ಡಾ. ಜಿ ಸುಧಾರವರು “ಕಥಾ ಕಾರ್ಯಾಗಾರ” ನಡೆಸಿಕೊಟ್ಟರು. ಅವರು ನೀಡಿದ ಅಪೂರ್ಣ ಕಥೆಯೊಂದನ್ನು ಎಲ್ಲ ಸದಸ್ಯೆಯರು ವಿಭಿನ್ನವಾಗಿ ಪೂರ್ಣಗೊಳಿಸಿ ಓದಿದರು. ನಂತರದ ದಿನಗಳಲ್ಲಿ ಸದಸ್ಯೆಯರು ಕವನ, ಕಥೆ ಬರೆಯುವುದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ.
ದಿನಾಂಕ 7-07-2016 ರಂದು “ತ್ರಿವೇಣಿಯವರ ಸಂಸ್ಮರಣ ದಿನ” ಆಚರಿಸಲಾಯಿತು. ಎಲ್ಲ ಸದಸ್ಯೆಯರು ತ್ರಿವೇಣಿಯವರ ಒಂದೊಂದು ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಆ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವಿತ್ತು.
ದಿನಾಂಕ 14-07-2016ರಂದು ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪಿ ಅನುಪಮಾರವರು ಅಧ್ಯಕ್ಷರಾಗಿ, ಚಂದನರವರು ಕಾರ್ಯದರ್ಶಿಯಾಗಿ, ಅಂಬಿಕರವರು ಖಜಾಂಚಿಯಾಗಿ ಆಯ್ಕೆಯಾದರು. ಭಾಷಾ ಆಟಗಳಿಗೆ ಹೊಸ ತಂಡಗಳ ರಚನೆ ಮಾಡಲಾಯಿತು.
ದಿನಾಂಕ 21-07-2016ರಂದು ಹಳೆಯ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಮತ್ತು ಹೊಸ ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಯಿತು. ಪಿ ಅನುಪಮಾರವರು ಅಧ್ಯಕ್ಷರಾಗಿ, ಚಂದನರವರು ಕಾರ್ಯದರ್ಶಿಯಾಗಿ, ಅಂಬಿಕರವರು ಖಜಾಂಚಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಅಂದು, ಹಿಂದಿನ ಒಂದು ವರ್ಷದಲ್ಲಿ ಅತಿ ಹೆಚ್ಚು ಹಾಜರಾತಿ ಪಡೆದಿದ್ದ ಎಂ ಎಸ್ ವಿಜಯಲಕ್ಷ್ಮಿಯವರಿಗೆ ವಿಶೇಷ ಬಹುಮಾನ ನೀಡಲಾಯಿತು.
ದಿನಾಂಕ 28-07-2016ರಂದು ವೇದಿಕೆಯಿಂದ ತ್ರೈಮಾಸಿಕ ಪತ್ರಿಕೆಯೊಂದನ್ನು ಹೊರತರುವ ಬಗ್ಗೆ ಚರ್ಚಿಸಲಾಯಿತು ಮತ್ತು ಅದಕ್ಕೆ “ಪ್ರಮತಿ” ಎಂದರೆ ವಿವೇಕ ಎಂದು ನಾಮಕರಣ ಮಾಡಲು ನಿರ್ಧರಿಸಲಾಯಿತು. ಎಲ್ಲಾ ಸದಸ್ಯೆಯರು ಉತ್ಸುಕರಾಗಿ ಕಥೆ, ಕವನ, ಲೇಖನ, ಭಾಷಾ ಆಟಗಳನ್ನು ಪತ್ರಿಕೆಗೆ ಕೊಡಲು ಮುಂದಾದರು.
ದಿನಾಂಕ 04-08-2016ರಂದು ತಲಕಾಡು, ಗಗನಚುಕ್ಕಿ, ಭರಚುಕ್ಕಿಗೆ ಒಂದು ದಿನದ ಪ್ರವಾಸ ಹಮ್ಮಿಕೊಳ್ಳಲಾಯಿತು. ತಲಕಾಡಿನಲ್ಲಿ ಸಭೆಯನ್ನು ಮುಗಿಸಿದ ನಂತರ ಎಲ್ಲಾ ಸದಸ್ಯೆಯರು ಚಿಕ್ಕ ಮಕ್ಕಳಂತೆ ನೀರಿನಲ್ಲಿ ಆಟವಾಡಿ ಆನಂದಿಸಿದರು.
ದಿನಾಂಕ 10-08-2016ರಂದು “ವಿಶ್ವ ಸ್ನೇಹ ದಿನ” ಮತ್ತು “ವಿಶ್ವ ತಂದೆಯರ ದಿನ”ವನ್ನು ಆಚರಿಸಲಾಯಿತು. ಅಂದು ಎಲ್ಲರು ತಮ್ಮ ಆತ್ಮೀಯ ಸ್ನೇಹಿತರ ಬಗ್ಗೆ, ತಂದೆಯ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಅಂದು ಸ್ನೇಹ ಮತ್ತು ತಂದೆಯ ಬಗ್ಗೆ ಇರುವ ಸಿನಿಮಾ ಹಾಡುಗಳನ್ನು ಬರೆಯುವ, ಹಾಡುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ದಿನಾಂಕ 25-08-2016ರಂದು ವೇದಿಕೆಯಲ್ಲಿ “ಸ್ವಾತಂತ್ರ್ಯ ದಿನ”ವನ್ನು ಆಚರಿಸಲಾಯಿತು. ದೇಶಪ್ರೇಮಿ ಗೀತೆಗಳನ್ನು ಹಾಡಲಾಯಿತು. ಸದಸ್ಯೆಯರೆಲ್ಲ ಸ್ವಾತಂತ್ರ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ದಿನಾಂಕ 22-09-2016ರಂದು ವೇದಿಕೆಯ “ವಾರ್ಷಿಕೋತ್ಸವ”ವನ್ನು ಸಂಘಟಿಸಲಾಯಿತು. ವಿವಿಧ ಆಟಗಳು, ಚರ್ಚೆಗಳು ನಡೆದವು. ಎಲ್ಲ ಸದಸ್ಯೆಯರು ಒಂದು ವರ್ಷದಲ್ಲಿ ಸಾಹಿತ್ಯ ವೇದಿಕೆಯಲ್ಲಿ ತಮಗಾದ ಅನುಭವಗಳನ್ನು, ತಮ್ಮಲ್ಲಾದ ಬದಲಾವಣೆಗಳನ್ನು ಖುಷಿಯಿಂದ ಮುಕ್ತವಾಗಿ ಹಂಚಿಕೊಂಡರು.
ದಿನಾಂಕ 6-10-2016ರಂದು “ವಿಶ್ವ ಹಿರಿಯ ನಾಗರಿಕರ ದಿನ”ವನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ಎಲ್ಲ ಸದಸ್ಯೆಯರು ಹಿರಿಯರ ಬಗೆಗಿನ ನಮ್ಮ ಕರ್ತವ್ಯಗಳ ಬಗ್ಗೆ ಚರ್ಚಿಸಿದರು, ತಮ್ಮ ಭಾವನೆ, ಅನುಭವಗಳನ್ನು ಹಂಚಿಕೊಂಡರು.
ಹೀಗೆ ನಮ್ಮ “ಮುಕ್ತ ಸಾಹಿತ್ಯ ವೇದಿಕೆ”ಯು ಈ ಒಂದು ವರ್ಷದಲ್ಲಿ ಹತ್ತುಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಎಲ್ಲ ಸದಸ್ಯೆಯರಲ್ಲೂ ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತಾ ಬಂದಿದೆ, ಅವರನ್ನು ಲೇಖಕಿಯರನ್ನಾಗಿ, ಕತೆಗಾರ್ತಿಯರನ್ನಾಗಿ, ಕವಯತ್ರಿಯರನ್ನಾಗಿ, ಭಾಷಣಕಾರರನ್ನಾಗಿ ರೂಪಿಸುತ್ತಾ ಬಂದಿದೆ.
No comments:
Post a Comment