ಕೈ- ಕೈ ಎಲ್ಲೋಯ್ತು?
ಕಸದ ಮೂಲೆಗೆ ಹೋಯ್ತು.
ಕಸದ ಮೂಲೆ ಏನು ಕೊಡ್ತು?
ಕಸ ಕೊಡ್ತು. ಕಸ ಏನ್ಮಾಡ್ದೆ?
ತಿಪ್ಪೆಗೆ ಹಾಕ್ದೆ. ತಿಪ್ಪೆ ಏನು ಕೊಡ್ತು ?
ಗೊಬ್ಬರ ಕೊಡ್ತು. ಗೊಬ್ಬರ ಏನ್ಮಾಡ್ದೆ?
ಗದ್ದೆಗೆ ಹಾಕಿದೆ. ಗದ್ದೆ ಏನು ಕೊಡ್ತು?
ಭತ್ತ ಕೊಡ್ತು. ಭತ್ತ ಏನು ಕೊಡ್ತು?
ಅಕ್ಕಿ ಕೊಡ್ತು. ಅಕ್ಕಿ ಏನ್ಮಾಡ್ದೆ?
ಅನ್ನ ಮಾಡಿ ಊಟ ಮಾಡ್ದೆ.
ಬಾಲ್ಯದಲ್ಲಿ ಅಜ್ಜಿ ಹಾಡು ಮತ್ತು ಆಟದ ಮೂಲಕ ಕಸವನ್ನು ಎಲ್ಲಿಹಾಕಬೇಕು ಮತ್ತು ಅದರ ಪ್ರಯೋಜನವನ್ನು ತಿಳಿಸುತ್ತಿದ್ದರು. ಆಗ ಪ್ಲಾಸ್ಟಿಕ್‍ನ ಬಳಕೆ ಇರಲಿಲ್ಲ. ಅಂಗಡಿಯಲ್ಲಿ ದಿನಸಿ, ಪೆಪ್ಪರ್ಮೆಂಟ್ ಮತ್ತು ಕಡಲೆಪುರಿ, ಇವೆಲ್ಲವನ್ನು ಕಾಗದದಲ್ಲಿ ಕಟ್ಟಿಕೊಡುತ್ತಿದ್ದರು. ಎಣ್ಣೆಯನ್ನು ಗಾಜಿನ ಶೀಶೆಯಲ್ಲಿ ತರುತ್ತಿದ್ದರು. ಹೋಟೆಲ್ ತಿಂಡಿಯನ್ನು ಎಲೆ ಮತ್ತು ದೊನ್ನೆಯಲ್ಲಿ ಕೊಡುತ್ತಿದ್ದರು. ಇದನ್ನೆಲ್ಲಾ ತರಲು ನಾವು ಹೊಲೆದ ಬಟ್ಟೆಯ ಚೀಲವನ್ನು ಕೊಂಡೊಯ್ಯುತ್ತಿದ್ದೆವು. ಮದುವೆ ಸಮಾರಂಭಗಳಲ್ಲೂ ಎಲೆ ಮತ್ತು ದೊನ್ನೆಯನ್ನು ಬಳಸುತ್ತಿದ್ದರು. ಪ್ರಯಾಣದಲ್ಲಿ ನೀರನ್ನು ರೈಲುಚೆಂಬು ಮತ್ತು ಆಹಾರವನ್ನು ಡಬ್ಬಿಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಆಹಾರವನ್ನು ಎಲೆ ಮೇಲೆ ಹಾಕಿಕೊಂಡು ತಿನ್ನುತ್ತಿದ್ದರು. ಅಡಿಗೆ ಮನೆಯಲ್ಲಿನ ತರಕಾರಿ ಮತ್ತು ಹಣ್ಣಿನ ಸಿಪ್ಪೆ, ಎಲ್ಲಾ ದನ ಕರುಗಳಿಗೆ ಆಹಾರವಾಗುತ್ತಿತ್ತು. ಉಳಿದ ಅನ್ನಾಹಾರವನ್ನು ನಾಯಿ, ಬೆಕ್ಕಿಗೆ ಹಾಕುತ್ತಿದ್ದರು. ಕಾಗದ ರಟ್ಟಿನ ಚೂರು, ಕರಟ, ತೆಂಗಿನ ಮಟ್ಟೆ ಮುಂತಾದುವುಗಳನ್ನು ಒಲೆ ಉರಿಸಲು ಬಳಸುತ್ತಿದ್ದರು. ಹತ್ತಿ ಬಟ್ಟೆ ಧರಿಸುತ್ತಿದ್ದರಿಂದ ಹರಿದ ಮೇಲೂ ಸ್ವಚ್ಚಗೊಳಿಸಲು ಬಳಸುತ್ತಿದ್ದರು. ಇನ್ನಿತರ ಕಸವನ್ನು ಒಂದೆಡೆ ಹಾಕಿ ಗೊಬ್ಬರವಾದಾಗ ಅದನ್ನು ಹೊಲ ಗದ್ದೆಗೆ ಹಾಕಿ ಫಸಲನ್ನು ತೆಗೆಯುತ್ತಿದ್ದರು. ಗೋಣಿ ದಾರ, ನೂಲಿನ ಹಗ್ಗವನ್ನು ಹಾಗೂ ತೆಂಗಿನ ನಾರಿನ ಹುರಿ ಬಳಸುತ್ತಿದ್ದರು. ಈ ಎಲ್ಲಾ ತ್ಯಾಜ್ಯಗಳು ಬೆಂಕಿಗೆ ಹಾಕಿದರೆ ಬೂದಿಯಾಗುವಂತಹದ್ದು ಮತ್ತು ಮಣ್ಣಿನಲ್ಲಿ ಕೊಳೆಯುವಂತಹದ್ದು.
ಈಗ ಚಾಕಲೇಟ್ ಬಿಸ್ಕೆಟ್ ಕೊಂಡರೆ ಅದಕ್ಕೆ ಸಿಲ್ವರ್ ಪೇಪರ್, ಪ್ಲಾಸ್ಟಿಕ್ ಪೌಚ್, ಅದರ ಮೇಲೆ ಪ್ಲಾಸ್ಟಿಕ್ ರ್ಯಾಪರ್ ಹಾಕಿರುತ್ತಾರೆ. ಎಣ್ಣೆ, ದಿನಸಿ ಮುಂತಾದವನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ಕೊಡುತ್ತಾರೆ. ಹೋಟೆಲ್ ತಿಂಡಿಯನ್ನು ಪ್ಲಾಸ್ಟಿಕ್ ಹಾಳೆ ಮತ್ತು ಕವರ್‍ನಲ್ಲಿ ಕೊಡುತ್ತಾರೆ. ರೆಡಿಮೇಡ್ ಶರ್ಟ್ ಕೊಂಡರೆ ಅದಕ್ಕೆ ಪ್ಲಾಸ್ಟಿಕ್ ಕಾಲರ್, ನೆಕ್ ಪೀಸ್, ಕ್ಲಿಪ್‍ಗಳು ಮತ್ತು ಗುಂಡು ಸೂಜಿಗಳನ್ನು ಹಾಕಿರುತ್ತಾರೆ. ಈಗ ಮದುವೆ ಸಮಾರಂಭಗಳಲ್ಲಿ ಮತ್ತು ದೂರ ಪ್ರಯಾಣದಲ್ಲಿ ಆಹಾರವನ್ನು ಹಾಕಿಕೊಂಡು ತಿನ್ನಲು, ಪ್ಲಾಸ್ಟಿಕ್ ತಟ್ಟೆ, ಪಾನೀಯಗಳನ್ನು ಕುಡಿಯಲು ಪ್ಲಾಸ್ಟಿಕ್ ಲೋಟ, ಅಂಗಡಿ ಮತ್ತು ಮಾಲ್‍ಗಳಲ್ಲಿ ಕೊಡುವ ಪ್ಲಾಸ್ಟಿಕ್ ಚೀಲಗಳು, ದನಗಳಿಗೆ ಹಾಕದ ಹಣ್ಣು ಮತ್ತು ತರಕಾರಿ ಸಿಪ್ಪೆ ಕಸವನ್ನು ಹೆಚ್ಚಿಸುತ್ತಿದೆ. ಮತ್ತೆ ಬಳಸಲು ಆಗದ ಸಿಂಥೆಟಿಕ್ ಬಟ್ಟೆ ಮತ್ತು ಸೀರೆ ಚೂರುಗಳು ರಸ್ತೆಯಲ್ಲಿ ಹಾರಾಡುತ್ತಿವೆ. ಉಳಿದ ಆಹಾರವನ್ನು ಬೀದಿಯ ಬದಿಯಲ್ಲಿ ಹಾಕುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ಪ್ಲಾಸ್ಟಿಕ್ ದಾರ, ಪಟ್ಟೆ ದಾರ ರಸ್ತೆಯಲ್ಲಿ ಬಿಸಾಕುವುದರಿಂದ ನಡೆಯುವವರ ಕಾಲಿಗೆ ಸಿಕ್ಕಿ ಎಡವಿ ಬೀಳುವಂತೆ ಮಾಡುತ್ತಿದೆ. ಪ್ಲಾಸ್ಟಿಕ್ ಚೀಲಗಳು ದನಕರುಗಳ ಹೊಟ್ಟೆಗೆ ಸೇರಿ ಅವುಗಳ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತಿದೆ.
ಈ ತ್ಯಾಜ್ಯವು ಮಣ್ಣಿನಲ್ಲಿ ಕೊಳೆಯುವಂತಹದ್ದಲ್ಲ. ಇದನ್ನು ಬೆಂಕಿಗೆ ಹಾಕಿದಾಗ ಕೆಟ್ಟ ವಾಸನೆ ಹಾಗೂ ಹೊಗೆ ಹರಡಿ ಪರಿಸರ ಕೆಡುತ್ತದೆ. ಸಾಧ್ಯವಾದಷ್ಟೂ ಹಿಂದಿನ ಕ್ರಮವನ್ನೇ ಅನುಸರಿಸಿದರೆ ಈಗಲೂ ಪ್ಲಾಸ್ಟಿಕ್ ಹಾವಳಿಯನ್ನು ತಪ್ಪಿಸಬಹÅದು. ಜೊತೆಗೆ ಅನಿವಾರ್ಯವಾದಾಗ ಪುನಃ ಪುನಃ ಬಳಸುವುದರಿಂದ, ಕಡಿಮೆ ಬಳಕೆ ಮತ್ತು ಪುನರ್ ಸಂಸ್ಕರಿಸಿ ಬಳಸಲು ಪ್ರಯತ್ನಿಸಬಹುದು. ಪ್ಲಾಸ್ಟಿಕ್ ಸಮಸ್ಯೆಯನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡಬಹುದು.
- ಪಾರ್ವತಾತಾಯಿ
No comments:
Post a Comment