Pages

Friday, 3 November 2017

ಮುಕ್ತ ಸಾಹಿತ್ಯ ವೇದಿಕೆ ಹಾಗೂ ಪ್ರಮತಿಯ ಪರಿಚಯ



ಚಾಮರಾಜನಗರದ ಕೊಳ್ಳೇಗಾಲದಲ್ಲಿ ೨ ವರ್ಷಗಳ ಹಿಂದೆ ಕೆಲವು ಸಾಹಿತ್ಯಾಸಕ್ತ ಮಹಿಳೆಯರು ಹುಟ್ಟು ಹಾಕಿದ ವೇದಿಕೆಯೇ "ಮುಕ್ತ ಸಾಹಿತ್ಯ ವೇದಿಕೆ." ೯ ಮಹಿಳೆಯರಿಂದ ಆರಂಭಗೊಂಡ ಈ ವೇದಿಕೆ ಇಂದು ೪೫ ಸದಸ್ಯೆಯರನ್ನು ಹೊಂದಿದೆ. ಪ್ರತಿ ವಾರ ಸೇರುವ ವೇದಿಕೆ ಸಾಹಿತ್ಯ, ಭಾಷೆ, ಪ್ರಸಕ್ತ ವಿದ್ಯಮಾನ, ಮಹಿಳೆಯರ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತದೆ. 

ಇದರೊಂದಿಗೆ ಮಹಿಳಾ ಪತ್ರಿಕೆಯನ್ನು ತರುವ ಉತ್ಸಾಹದೊಂದಿಗೆ ನಮ್ಮ ಸದಸ್ಯೆಯರು "ಪ್ರಮತಿ" ಎನ್ನುವ ಪತ್ರಿಕೆಯನ್ನು ಹೊರತರಲಾರಂಭಿಸಿದೆ. ಅದಕ್ಕೆ ಪೂರಕವಾಗಿ ಈ ಬ್ಲಾಗ್ ಆರಂಭಿಸುತ್ತಿದ್ದೇವೆ. 

ಓದುಗರು ತಮ್ಮ ಸಲಹೆ ಸೂಚನೆ ನೀಡಬಹುದು. 
- ಸಂಪಾದಕ ಮಂಡಳಿ 



ವ್ಯಕ್ತಿ ಪರಿಚಯ - ಆಲೂರು ವೆಂಕಟರಾಯರು




ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿ,ಕನ್ನಡಿಗರನ್ನು ಜಾಗೃತಗೊಳಿಸಿ ಭವ್ಯ ಕರ್ನಾಟಕದ ಕನಸ್ಸನ್ನು ಕಂಡು ಸಾಕಾರಗೊಳಿಸಿದ ಆಲೂರು ವೆಂಕಟರಾಯರು 1880 ಜುಲೈ 12 ರಂದು ಬಿಜಾಪುರದಲ್ಲಿ ಜನಿಸಿದರು.
ತಂದೆ ಭೀಮರಾವ್ ಮತ್ತು ತಾಯಿ ಭಾಗೀರಥಮ್ಮ. ಇವರ ವಂಶಜರಿಗೆ ಆಲೂರು ಜಹಗೀರಾಗಿ ಬಂದಿದ್ದರಿಂದ ಆಲೂರು ಎಂಬುದು ಇವರ ಮನೆತನದ ಹೆಸರಾಗಿದೆ. ಇವರ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಧಾರವಾಡದಲ್ಲಿ ನಡೆಯಿತು. ಈ ಸಮಯದಲ್ಲಿ ಹಲವು ಚಳವಳಿಗಳಲ್ಲಿಯೂ ಭಾಗವಹಿಸಿದ್ದರು ಹಾಗೂ ಶಾಲಾ ಶಿಕ್ಷಕರುಗಳಿಂದ ಪ್ರಭಾವಿತಗೊಂಡಿದ್ದರು. ಇದೇ ಅವರ ಮುಂದಿನ ಹೋರಾಟಕ್ಕೆ ನಾಂದಿಯಾಯಿತು. ನಂತರ ಇವರು ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಸೇರಿದರು. ಸಹಪಾಠಿ ವಿನಾಯಕ ದಾಮೋದರ ಸಾವರಕರ ಮತ್ತು ಅವರ ಸ್ವಾತಂತ್ರ್ಯ ಹೋರಾಟಗಾರ ಸ್ನೇಹಿತರ ಒಡನಾಟದಿಂದ ಇವರಲ್ಲಿ ರಾಷ್ಟ್ರಾಭಿಮಾನ ಜಾಗೃತಗೊಂಡಿತು. ಅಲ್ಲದೆ ಗೋಖಲೆ,ರಾಜವಾಡ, ಮೊದಲಾದವರುಗಳಿಂದ ಸ್ಫೂರ್ತಿಗೊಂಡಿದ್ದರು. ತಿಲಕರ ಒಡನಾಟ ಮತ್ತು ಅವರ ಉಗ್ರಲೇಖನಗಳು ಇವರ ಮೇಲೆ ತುಂಬಾ ಪ್ರಭಾವ ಬೀರಿತು. ಆ ಸಮಯದಲ್ಲಿ ವೆಂಕಟರಾಯರಿಗೆ ಕರ್ನಾಟಕತ್ವದ ಕಲ್ಪನೆ ಇನ್ನೂ ಬಂದಿರಲಿಲ್ಲ. ಆದರೂ ಅವರಲ್ಲಿ ಕನ್ನಡಾಭಿಮಾನವಿತ್ತು. ಅಂದು ಕರ್ನಾಟಕವು ಮಹಾರಾಷ್ಟ್ರದ ಒಂದು ಅಂಗವಾಗಿತ್ತು. ಅವರು ಓದುತ್ತಿದ್ದ ಕಾಲೇಜಿನ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳು ಇರಲಿಲ್ಲ. ಇದಕ್ಕಾಗಿ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಧಾರವಾಡದಿಂದ ಕನ್ನಡ ಪುಸ್ತಕಗಳನ್ನು ತರಿಸಲಾಯಿತು. 1903 ರಲ್ಲಿ  ಬಿ.ಎ ಪದವಿ ಮುಗಿಸಿದರು.
ಕಾಲೇಜು ಶಿಕ್ಷಣ ಮುಗಿಸಿದ ವೆಂಕಟರಾಯರು ಒಮ್ಮೆ ಹಂಪೆಗೆ ಹೋಗಿದ್ದರು. ಅಲ್ಲಿನ ಅವಶೇಷಗಳು ಅವರ ಮೇಲೆ ತುಂಬಾ ಪರಿಣಾಮ ಬೀರಿದವು. " ಆ ದಿವಸ ನನ್ನ ಮನದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು ಚಲನಚಿತ್ರ ಪಟದಲ್ಲಿ ವಿದ್ಯುತ್ ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡ ಹತ್ತಿತು.ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿಧದ ತರಂಗಗಳಿಗೆ ಇಂಬುಕೊಟ್ಟಿತು.ಹೃದಯ ಸಮುದ್ರವು ಅಲ್ಲೋಲಕಲ್ಲೋಲವಾಯಿತು.ಆ ದಿವಸವು ನನ್ನ ಜೀವನಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಎಂದು ತಮ್ಮ ಅಂದಿನ ಅನುಭವವನ್ನು ಸ್ವತಃ ಅವರೇ ಹೇಳಿದ್ದಾರೆ. ಅಂದಿನಿಂದ ಅವರ ಕನ್ನಡಾಭಿಮಾನ ಹೆಚ್ಚಾಗಿ, ಕರ್ನಾಟಕದ ಗತವೈಭವವನ್ನು ಕನ್ನಡಿಗರ ಮುಂದಿಟ್ಟು ಅವರನ್ನು ಎಚ್ಚರಗೊಳಿಸಬೇಕೆಂದು ದೃಢಸಂಕಲ್ಪ ಮಾಡಿದರು. ನಂತರ ಕಾನೂನು ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ 1905 ರಲ್ಲಿ ಮುಗಿಸಿದರು. ನಂತರದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಧಾರವಾಡದಲ್ಲಿ ಪ್ರಾರಂಭಿಸಿದರು. ಇಟಲಿಯ ಮ್ಯಾಝಿನಿಯಿಂದ ಪ್ರಭಾವಿತರಾದ ಇವರು ಅವನ ಜೀವನಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದರು. ಅದರಲ್ಲಿನ " ಇಟಲಿಯು ಪರದಾಸ್ಯದಲ್ಲಿ ತೊಳಲುತ್ತ ಸೂತಕಾವಸ್ಥೆಯಲ್ಲಿರುವಾಗ ತರುಣರು ನಗು ಮೊಗದಿಂದ ನಲಿದಾಡುವುದೆಂದರೇನು?"  ಎಂಬ ವಾಕ್ಯದಿಂದ ಪ್ರಚೋದನೆಗೊಂಡ ವೆಂಕಟರಾಯರು ತಮ್ಮ ವಕೀಲಿವೃತ್ತಿಯನ್ನು ಬಿಟ್ಟು ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಿದರು. 
ಅಂದು ಜನರಲ್ಲಿ ರಾಷ್ಟ್ರೀಯತೆ,ರಾಷ್ಟ್ರಾಭಿಮಾನಗಳನ್ನು ಮೂಡಿಸಲು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿತ್ತು. ಅಂತಯೇ ವೆಂಕಟರಾಯರು ಸಹ ಧಾರವಾಡದಲ್ಲಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ಇಲ್ಲಿ ರಾಷ್ಟ್ರಾಭಿಮಾನದ ಜೊತೆಗೆ ಇಂಗ್ಲಿಷ್ ರ ಗುಲಾಮಗಿರಿಯಿಂದ ಹೊರಬರಲು  ಸ್ವಾವಲಂಬನೆಯನ್ನು ಕಲಿಸಲಾಗುತ್ತಿತ್ತು. ಈ ಶಾಲೆಯಲ್ಲಿ ದೀಪದಕಡ್ಡಿ ತಯಾರಿಕೆ,ಗೇಣಿಗೆ,ಚಿತ್ರಕಲೆ,ಮರಗೆಲಸ, ಮುದ್ರಣಕಲೆ ಮೊದಲಾದ ಸ್ವಯಂ ಉದ್ಯೋಗ ತರಬೇತಿಯನ್ನು ಕೊಡಲಾಗುತ್ತಿತ್ತು. ಆದರೆ ಸರ್ಕಾರದ ನೀತಿ ಮತ್ತು ಹಣದ ಅಭಾವದಿಂದ ಈ ಶಾಲೆ ಹೆಚ್ಚು ದಿನ ನಡೆಯಲಿಲ್ಲ. ವೆಂಕಟರಾಯರು ರಾಷ್ಟ್ರೀಯ ಚಳವಳಿಯ ಜೊತೆಯಲ್ಲೇ ಕನ್ನಡಭಾಷೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟವನ್ನು ಮಾಡುತ್ತಿದ್ದರು. ವೆಂಕಟರಾಯರು ನೇತೃತ್ವದಲ್ಲಿ 1936 ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ವಿಜಯನಗರ ಸ್ಥಾಪನೆ ಷಡಶತಮಾನೋತ್ಸವವು ಹಂಪೆಯಲ್ಲಿ ನಡೆಯಿತು. ಇದರಲ್ಲಿ ಐತಿಹಾಸಿಕ ಸಮ್ಮೇಳನ, ವಸ್ತು ಪ್ರದರ್ಶನ, ಸಂಗೀತಕಛೇರಿಗಳು,ನಾಟಕ ಪ್ರದರ್ಶನಗಳು ಮೊದಲಾದ ಕಾರ್ಯಕ್ರಮಗಳು ನಡೆದವು.
ಕರ್ನಾಟಕದಲ್ಲಿ ಒಂದೇ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕೆಂಬುದು ವೆಂಕಟರಾಯರು ಕನಸ್ಸಾಗಿತ್ತು. ಆದರೆ ಅದು ನೆರವೇರದೆ 1914 ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು.
ಕರ್ನಾಟಕತ್ವದ ಪರಿಕಲ್ಪನೆ ಹೊಂದಿದ್ದ ವೆಂಕಟರಾಯರಿಗೆ  ಕರ್ನಾಟಕಕ್ಕೆ ತನ್ನದೇ ಆದ ರಾಜಕೀಯ ಪರಿಷತ್ತು ಇರಬೇಕೆಂದು ಅವರ ನಿಲುವಾಗಿತ್ತು. ಅದುವರೆವಿಗೂ ಕರ್ನಾಟಕದ ಉತ್ತರ ಭಾಗ ದಕ್ಷಿಣ ಮಹಾರಾಷ್ಟ್ರವಾಗಿತ್ತು ,ದಕ್ಷಿಣ ಭಾಗ ಮೈಸೂರಾಗಿತ್ತು. ಹೀಗಾಗಿ ಕರ್ನಾಟಕಕ್ಕೆ ಪ್ರತ್ಯೇಕ ಪರಿಷತ್ತು ಬೇಕೆಂದು ಇವರು ವಾದಿಸುತ್ತಿದ್ದರು. ಪರಿಣಾಮವಾಗಿ 1920 ರಲ್ಲಿ  ಧಾರವಾಡದಲ್ಲಿ ವಿ಼. ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ಪ್ರಥಮ ಕರ್ನಾಟಕ ಪರಿಷತ್ತಿನ ಅಧಿವೇಶನ ನಡೆಯಿತು. ಇದೇ ಇಂದಿನ ಕೆ.ಪಿ.ಸಿ.ಸಿ.
ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಇತಿಹಾಸವನ್ನು ತಿಳಿಯಬೇಕಾದರೆ ಒಂದು ಪ್ರತ್ಯೇಕ ಸಂಶೋಧನ ಮಂಡಳಿಯ ಅವಶ್ಯಕತೆಯಿದೆ ಎಂದ ವೆಂಕಟರಾಯರು 1914 ರಲ್ಲಿ ಮಂಡಳಿಯೊಂದನ್ನು ಸ್ಥಾಪಿಸಿದರು. ಜೊತೆಗೆ ಎಲ್ಲೆಡೆ ಕಾಣ ಬರುತ್ತಿದ್ದ ಶಿಲಾಶಾಸನಗಳಲ್ಲಿನ ಲಿಪಿಗಳಿಂದಲೂ ಸಹ ಇತಿಹಾಸವನ್ನು ತಿಳಿಯಬಹುದೆಂದು ಮನಗಂಡ ವೆಂಕಟರಾಯರು ಅವುಗಳ ಅಧ್ಯಯನಕ್ಕಾಗಿ " ಸರ್ವೇಕ್ಷಣ ಯೋಜನೆ" ಯನ್ನು ಪ್ರಾರಂಭಿಸಿದರು.
ಕನ್ನಡದಲ್ಲಿ ಉತ್ತಮ ಗ್ರಂಥಗಳ ಕೊರತೆಯಿರುವುದನ್ನು ಅರಿತ ವೆಂಕಟರಾಯರು ಧಾರವಾಡದಲ್ಲಿ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ಆಯೋಜಿಸಿದರು. ಅದರಲ್ಲಿ  ಎಲ್ಲರೂ ' ಕರ್ನಾಟಕ ಗ್ರಂಥಮಾಲೆ ' ಎಂಬ ಹೆಸರಿನಿಂದ ಪ್ರಕಟಿಸಬೇಕೆಂದು ಅಂಗೀಕರಿಸಲಾಯಿತು. ಎರಡನೇ ಸಮ್ಮೇಳನವು ಧಾರವಾಡದಲ್ಲಿ ನಡೆಯಿತು. ಮೂರನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. ಇದರ ಫಲವಾಗಿ 1915 ರಲ್ಲಿ " ಕರ್ನಾಟಕ ಸಾಹಿತ್ಯ ಪರಿಷತ್ತು " ಸ್ಥಾಪನೆಯಾಯಿತು.ಇದು ವೆಂಕಟರಾಯರ ಮಹತ್ಕಾರ್ಯಗಳಲ್ಲಿ ಒಂದಾಗಿದೆ. ಇದೇ ಈಗಿನ ಕನ್ನಡ ಸಾಹಿತ್ಯ ಪರಿಷತ್ತು.
1905 ರಲ್ಲಿ " ವಿದ್ಯಾವರ್ಧಕ ಸಂಘ" ಕ್ಕೆ ಸೇರಿ, ಮೂಲಕ ವೆಂಕಟರಾಯರು ಕನ್ನಡದ ಅಭ್ಯಾಸವನ್ನು  ಪ್ರಾರಂಭಿಸುವುದರ ಮೂಲಕ ಕನ್ನಡ ಸಾಹಿತ್ಯ ಕೃಷಿಯನ್ನು ಆರಂಭಿಸಿದರು.
" ವಾಗ್ಭೂಷಣ " ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡು ಅದಕ್ಕೆ ಹೊಸ ರೂಪವನ್ನು ನೀಡಿದರು. ಇವರ ಮೊದಲ ಕೃತಿ " ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯರು" ಇದರಿಂದ ಪ್ರೇರಣೆಗೊಂಡ ಶಾಂತಕವಿ ವಿಜಯ ವಿದ್ಯರಣ್ಯ ಕೀರ್ತನೆಯನ್ನು ಬರೆದರು. 
1912 ರಲ್ಲಿ ವೆಂಕಟರಾಯರು " ಕರ್ನಾಟಕದ ಗತವೈಭವ " ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ ಕನ್ನಡಿಗರ ಪ್ರಾಚೀನ ಇತಿಹಾಸವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. " ನಿಮ್ಮ ನಿರಭಿಮಾನದ ಮುಸುಕನ್ನು ಹಾರ ಹಿಡೆಯಲಿಕ್ಕೆ ನೀವು ಇತಿಹಾಸದ ಶರಣು ಹೋಗಿರಿ " ಎಂದು ಕನ್ನಡಿಗರಿಗೆ ಇತಿಹಾಸವನ್ನು  ತಿಳಿಸುವ ಉದ್ದೇಶದಿಂದಲೇ ಈ ಕೃತಿಯನ್ನು ಬರೆದಿರುವುದಾಗಿ ಸ್ವತಃ ವೆಂಕಟರಾಯರೇ ಹೇಳಿದ್ದಾರೆ. ಇದಲ್ಲದೆ " ಕರ್ನಾಟಕದ ವೀರರತ್ನಗಳು" "ಕರ್ನಾಟಕದ ಸೂತ್ರಗಳು" ಮತ್ತು " ಕರ್ನಾಟಕತ್ವದ ವಿಕಾಸ" ಗ್ರಂಥಗಳನ್ನು ಬರೆದು ಕನ್ನಡಿಗರು ಸ್ಫೂರ್ತಿಗೊಳ್ಳುವಂತೆ ಮಾಡಿದರು.
ಇಂಗ್ಲಿಷ್ ನ ಸ್ಪೆನ್ಸರನ Education ಮತ್ತು ಅರಿಸ್ಟಾಟಲ್‌ನ Data of ethics, J.S. ಮಿಲ್ ನ Liberty ಮೊದಲಾದ ಕೃತಿಗಳನ್ನು  ಕನ್ನಡಕ್ಕೆ ಅನುವಾದಿಸಿದರು. 
ಗಾಂಧಿಚರಿತೆ,ಮ್ಯಾಝಿನಿ ಚರಿತೆ, ಅರವಿಂದರ ಪತ್ರ, ಅರವಿಂದರ ರಾಜಕಾರಣ, ಚಳವಳಿಗಳ ಆತ್ಮ ಇವುಗಳನ್ನು ಭಾಷಾಂತರಿಸಿದರು.ಹಾಗು ವಿವೇಕಾನಂದರ " ಪೂರ್ವ ಮತ್ತು ಪಶ್ಚಿಮ, ಭಕ್ತಿಯೋಗವನ್ನು ಭಾಷಾಂತರಿಸಿದರು.
ರಾಷ್ಟ್ರೀಯತ್ವದ ಅರಿವು ಮೂಡಿಸಲು " ರಾಷ್ಟ್ರೀಯತ್ವದ ಮೀಮಾಂಸೆ" ಯನ್ನು ಬರೆದರು.ಇದಲ್ಲದೆ ' ನವಜೀವನ ಗ್ರಂಥಮಾಲೆ' ಯನ್ನು ಆರಂಭಿಸಿದರು. ಕನ್ನಡಿಗರ ಪರಭಾಷಾ ವ್ಯಾಮೋಹವನ್ನು ಹೋಗಲಾಡಿಸಲು " ಕನ್ನಡಿಗರ ಭ್ರಮನಿರಸನ" ಎಂಬ ನಾಟಕವನ್ನು ಬರೆದರು. ತಿಲಕರ " ಗೀತಾರಹಸ್ಯ" ವನ್ನು ಕನ್ನಡಕ್ಕೆ  ಭಾಷಾಂತರಿಸಿದರು. ಅಲ್ಲದೆ ಗೀತಾಪ್ರಕಾಶ,ಗೀತಾಸಂದೇಶ,ಗೀತಾಪ್ರಭಾವ ಭಾಗ 1,2 ನ್ನು ಬರೆದರು. ದ.ರಾ.ಬೇಂದ್ರೆಯವರ " ಕೃಷ್ಣಕುಮಾರಿ" ಕವನ ಸಂಕಲನವನ್ನು ಪ್ರಕಟಿಸಿದರು.
ಕರ್ನಾಟಕದ ಏಕೀಕರಣವೇ ಇವರ ಗುರಿಯಾಗಿದ್ದು,1922 ರಲ್ಲಿ "ಜಯಕರ್ನಾಟಕವೇ ನಮ್ಮ ಮಂತ್ರಘೋಷ" ಎಂಬ ಘೋಷಣೆಯೊಂದಿಗೆ "ಜಯ ಕರ್ನಾಟಕ " ಪತ್ರಿಕೆಯನ್ನು ಪ್ರಾರಂಭಿಸಿದರು. ಇದರಲ್ಲಿ ಸಾಹಿತ್ಯ, ಕಲೆ,ವಿಮರ್ಶೆ, ಧರ್ಮ,ತತ್ವಜ್ಞಾನ,ವಿಜ್ಞಾನ, ರಾಜಕಾರಣ,ಸಣ್ಣಕತೆ, ಕವಿತೆ ಮತ್ತು ಆರ್ಥಿಕ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಲೇಖನಗಳು ಪ್ರಕಟವಾಗುತ್ತಿದ್ದವು. ಇದಲ್ಲದೆ ವೆಂಕಟರಾಯರು ಹಲವು ಪತ್ರಿಕೆಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಕರ್ನಾಟಕ ಪತ್ರ,ಕರ್ನಾಟಕ ವೃತ್ತ,ಕನ್ನಡ ಕೇಸರಿ ಪತ್ರಿಕೆಗಳಿಗೆ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಸ್ವಲ್ಪದಿನ ಕರ್ಮವೀರ ಪತ್ರಿಕೆಯನ್ನು ನಡೆಸಿದರು.
ವೆಂಕಟರಾಯರು ತಮ್ಮ ಜೀವನದ ಅನುಭವಗಳ ಬಗ್ಗೆ " ಜೀವನ ಸ್ಮೃತಿ ಗಳು " ಎಂಬ ಆತ್ಮಚರಿತೆಯನ್ನು ಬರೆದಿದ್ದಾರೆ.
ವೆಂಕಟರಾಯರು ಕರ್ನಾಟಕತ್ವದ ಪರಿಕಲ್ಪನೆಯೊಂದಿಗೆ ರಾಷ್ಟ್ರಾಭಿಮಾನವೂ ಮಿಳಿತವಾಗಿತ್ತು." ಕರ್ನಾಟಕ್ಕಾಗಿ ಕೆಲಸ ಮಾಡುವಾಗ ನಾನು ರಾಷ್ಟ್ರೀಯತ್ವವನ್ನೆಂದೂ ಕಣ್ಮರೆ ಮಾಡಿಲ್ಲ.ನನಗೆ ಅವೆರಡರಲ್ಲಿ ವಿರೋಧವೇ ಕಾಣುವುದಿಲ್ಲ. ನನಗೆ ಕರ್ನಾಟಕ ಎಂದರೆ ಅದೊಂದು ಕಿರಣ ಕಾಜು (focusing lens) ಅದರೊಳಗಿನಿಂದ ನನಗೆ ಭರತಭೂಮಿಯೇ ಏಕೆ ಇಡೀ ವಿಶ್ವವೇ ಕಾಣುತ್ತದೆ.ವಿಶ್ವದ ಕಿರಣಗಳು ನನ್ನ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿವೆ,ಅಂತರ್ಯಾಮಿಯಾಗಿವೆ" ಎಂದು ಹೇಳಿರುವುದರಲ್ಲಿ ಅವರ ರಾಷ್ಟ್ರಾಭಿಮಾನವನ್ನು ಕಾಣಬಹುದು. ಕನ್ನಡಿಗರಲ್ಲಿ ಸ್ಫೂರ್ತಿ ತರಲು ಹಲವಾರು ಉತ್ಸವಗಳನ್ನು ನಡೆಸಿ ಕನ್ನಡ ಪ್ರಚಾರವನ್ನು ಮಾಡುತ್ತಿದ್ದರು.
ಹೀಗೆ ಕನ್ನಡ ನಾಡು ನುಡಿಗಾಗಿ ಇವರ ಆರು ದಶಕಗಳ ಹೋರಾಟದ ಫಲವಾಗಿ 1956 ನವೆಂಬರ್  1ರಂದು ಏಕೀಕೃತ ಕರ್ನಾಟಕ ಉದಯವಾಯಿತು. ವೆಂಕಟರಾಯರ ಕನಸು ನನಸಾಯಿತಾದರೂ ಕರ್ನಾಟಕ ಎಂದು ಕರೆಯಲಿಲ್ಲವೆಂದು ಬೇಸರವೂ ಆಯಿತು. ಆದರೂ " ಈಗ ಮೈಸೂರು ರಾಜ್ಯವೆಂದು ತಪ್ಪಾಗಿ ಹೆಸರಿಡಲ್ಪಟ್ಟ ಕರ್ನಾಟಕ ರಾಜ್ಯವು ಆಯುಷ್ಮಂತವಾಗಲಿ,ಆರೋಗ್ಯವಂತವಾಗಲಿ ಮತ್ತು ಭಾಗ್ಯವಂತವಾಗಲಿ ಎಂದು ಹರಸುತ್ತೇನೆ" ಎನ್ನುವುದನ್ನು  ನೋಡಿದರೆ ಅವರ ಕರ್ನಾಟಕದ ಮೇಲಿನ ಅಭಿಮಾನ ತಿಳಿಯುತ್ತದೆ.
ಕನ್ನಡ ನಾಡು ನುಡಿಗಾಗಿ ಅವಿರತವಾಗಿ ಸೇವೆ ಸಲ್ಲಿಸಿದ ವೆಂಕಟರಾಯರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ,ಗೌರವಿಸಿದವು.
1921 ರಲ್ಲಿ ಅಲಸೂರು ಪೇಟೆಯಲ್ಲಿ ಮಾನಪತ್ರದೊಂದಿಗೆ " ದೇಶಸೇವಾ ಧುರೀಣ ಮತ್ತು ಸ್ವಭಾಷಾ ರಕ್ಷಕ " ಎಂಬ ಬಿರುದನ್ನು ನೀಡಲಾಯಿತು.
1930 ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರನ್ನಾಗಿ ಮಾಡುವುದರ ಮೂಲಕ ಅವರ ಹೋರಾಟಕ್ಕೆ ಗೌರವ ತೋರಿಸಿದರು.
1941 ರಲ್ಲಿ ಹೈದರಾಬಾದಿನ ಕನ್ನಡಿಗರು " ಕರ್ನಾಟಕ ಕುಲ ಪುರೋಹಿತರು " ಎಂಬ ಬಿರುದು ನೀಡಿ ಸನ್ಮಾನಿಸಿದರು.
1961 ರಲ್ಲಿ ಬೆಂಗಳೂರು ನಗರಸಭೆ ಮಾನಪತ್ರ ನೀಡಿ ಸನ್ಮಾನಿಸಿತು.
ಹೀಗೆ ನಾಡಸೇವೆಯೊಂದಿಗೆ ದೇಶಸೇವೆಯನ್ನು ಮಾಡುತ್ತಾ ತಮ್ಮ ಜೀವಮಾನವಿಡೀ ಹೋರಾಡಿ ತನು ಮನ ಧನವನ್ನು ಅರ್ಪಿಸಿದ. ವೆಂಕಟರಾಯರು 1964 ಫೆಬ್ರವರಿ 25 ರಂದು ನಿಧನರಾದರು. " ಕರ್ನಾಟಕ ದೇವಿಯ ಮಂದಿರದಲ್ಲಿ ಉರಿಯುತ್ತಿರುವ ಹೂ ಬತ್ತಿ" ಎಂದ ವೆಂಕಟರಾಯರು ತಮ್ಮ ಅವಿರತ ಹಾಗೂ ನಿಸ್ವಾರ್ಥ ಸೇವೆಯಿಂದ ಎಲ್ಲರ ಮನದಲ್ಲಿ ನಂದಾದೀಪವಾಗಿದ್ದಾರೆ. ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವೆಂಕಟರಾಯರು " ಕನ್ನಡ ಕುಲದ ಪುರೋಹಿತ" ರೇ ಹೌದು.
- ವಿಜಯಲಕ್ಷ್ಮಿ ಎಂ ಎಸ್ 

Tuesday, 31 October 2017

ಚುಟುಕು


ಯೋಚನೆ ಒಳ್ಳೆಯ ದಿರಲಿ
ಮನಸ್ಸು ಶುದ್ಧವಿರಲಿ
ಗಮನ ಒಳ್ಳೆಯ ಕಡೆ ಇರಲಿ
ದಿನಗಳು ನಗುತ್ತಾ ಬರಲಿ
ನಮ್ಮ ಸಾಹಿತ್ಯ ವೇದಿಕೆ ವಾರವಾರವು ಸದಸ್ಯನಿಯರಿಂದ ತುಂಬುತ್ತಿರಲಿ,



ನಮ್ಮ ಮನೆಯಲ್ಲಿದೆ ಒಂದು ಬೆಕ್ಕು
ಅದು ಇದ್ದರೆ ನಮ್ಮ ಮನೆಗೆ ಲಕ್ಕು
ಹಾಲು ಕುಡಿದು ಹೆಚ್ಚಾಯಿತು ಸೊಕ್ಕು
ಅದಕ್ಕೆ ಓಡಿಸಿದೆ ನಕ್ಕು

   - ಅರುಣ ಎಂ

ಭಾಷಾ ಆಟಗಳು - 1


ಈ ಕೆಳಕಂಡ ಅಕ್ಷರಗಳನ್ನು ಸರಿಯಾಗಿ ಜೋಡಿಸಿ - - ಪ್ರಮೀಳ 

1. ಉ ಡ ದೇ ಸಿ ಣ ಹ ಬೇ ಯ

2, ಧ್ವ ತ್ರಿ ಸು ಏ ಜ ರ್ಣ ರಿ ವ

3, ಸ್ವ ನ  ನಾ  ಯಿ  ತಾ  ಡೇ  ಮ್ಮ ರ್ಗ

4, ಮೌ  ಮಾ ಗ ಯ ವೀ  ಲ್ಯ  ಳು  ನ

5, ನೈ  ಶಿ  ಪು  ಲ್ಪ ಕ ಣ್ಯ ಲಾ  ತೆ

6, ಮು ಗೆ  ಣ್ಣು ಕ್ಕ ಕ  ರು  ಣ್ಣ ಮು

7, ಮಿ  ನಂ  ರು  ಸ್ವಾ  ಕ ವೀ  ದ ವೇ

8,  ಗ ಣೆ   ಜೋ  ಳ ಕ್ಷ ಡ  ರ ಅ


9, ದೇ  ಕ ವಿ  ನ್ನ ಲ ಡ  ಕು  ದ

10, ಚೆ  ರು  ಕಿ  ರಾ  ಮ್ಮ ತ್ತು  ಣಿ   ನ್ನ


ಒಗಟುಗಳು (ಸಂಗ್ರಹ - ಬಿ ಪಾರ್ವತಿ)
1. ಹುಟ್ಟುತ್ತಲೇ ಹಸಿರು ಪಚ್ಚೆ ತಾನಲ್ಲ. ಬೆಳೆಯುತ್ತಲೇ ಕೆಂಪು ರತ್ನ ತಾನಲ್ಲ, ಮುಪ್ಪಿನ ಕಾಲಕ್ಕೆ ಕಪ್ಪು ಕಸ್ತೂರಿ ತಾನಲ್ಲ ಹಾಗಾದರೆ ನಾನಾರು?- 
2. ಕತ್ತಲಿನಲ್ಲಿ ಹಾರಾಟ, ಆಡುವೆ ನಾನು ತುಂಟಾಟ, ನೋಡುವೆ ನೀನು ಮಿನುಗಾಟ, ನಾನ್ಯಾರೆಂದು ಹೇಳುವಿಯಾದರೆ ಉಂಟು ನಿನಗೆ ಸವಿಯೂಟ - 
3. ಸಾಗರ ಪುತ್ರ ಸಾರಿನ ಮಿತ್ರ. – 
4. ಒಂಟಿ ಕಾಲಿನಲ್ಲಿ ಕೊಕ್ಕರೆಗೆ ನೂರಾರು ರೆಕ್ಕೆ ಉದುರಿದಂತೆಲ್ಲಾ ಬೆಳೆಯುತ್ತೆ ಮೇಲಕ್ಕೆ. - 


  

ಚೈತನ್ಯ ಚಿಲುಮೆ - ಫ್ರೆಡ್ ಹಾರ್ಟಮನ್


ಪ್ರಯತ್ನದ ಫಲ
ಯಾವುದೇ ಒಬ್ಬ ಮನುಷ್ಯ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು. ಅಂದರೆ ಮುಂದೆ ನಾನು ಹೀಗಾಗಬೇಕು ಅನ್ನೋ ಗಟ್ಟಿ ನಿಶ್ಚಯ ಮನಸ್ಸಿನಲ್ಲಿದ್ರೆ ಏನನ್ನಾದರೂ ಸಾಧಿಸಬಹುದು. ಇರಬೇಕು ಗುರಿಯನ್ನು ಇಟ್ಟುಕೊಳ್ಳುವುದರ ಜೊತೆಗೆ ಪ್ರಯತ್ನವು ಇರಬೇಕು. ಪ್ರಯತ್ನವಿದ್ದರೆ ಫಲ ಖಂಡಿತ ದೊರಕುತ್ತದೆ. ಹೀಗೆ ಪ್ರಯತ್ನ ಪಟ್ಟು ಸಾದಿಸಿದವರಲ್ಲಿ ಡೇವಿಡ್ ಮನ್ ಕೂಡ ಒಬ್ಬ.
       ಡೇವಿಡ್ ಹಾರ್ಟಮನ್ ಒಬ್ಬ ಕುರುಡ. ಅವನ ತಂದೆಯ ಹೆಸರು ಫ್ರೆಡ್ ಹಾರ್ಟಮನ್. ಅವನ ತಂದೆ ಒಬ್ಬ ಬ್ಯಾಂಕ್ ನೌಕರನಾಗಿದ್ದ. ಒಂದು ದಿನ ಡೇವಿಡ್ "ನಾನು ಬೇಸ್ ಬಾಲ್ ಡಬೇಕು.ಅಂತಿದೀನಿ ಆಡಬಹುದ"ಎಂದು ತನ್ನ ತಂದೆಯನ್ನು ಕೇಳಿದನು. ಅದಕ್ಕೆ ಅವನ ತಂದೆ "ಪ್ರಯತ್ನ ಪಡು ನೋಡೋಣ ಪ್ರಯತ್ನ ಪಡದಿದ್ದರೆ ಏನು ಅಂತ ಗೊತ್ತಾಗೋದಿಲ್ಲ ಪ್ರಯತ್ನ ಮಾಡು ನೀನು ಬೇಸ್ ಬಾಲ್ ಆಡುತ್ತೀಯ" ಎಂದು ಹೇಳಿದರು .ಆ ನಂತರ ಡೇವಿಡ್ ಬೇಸ್ ಬಾಲ್ ಆಡಿ ಕಲಿತನು.ಅವನ ತಂದೆ  ಕೂಡ ಅದಕ್ಕೆ ಪ್ರೋತ್ಸಾಹಿಸಿದರು.ಡೇವಿಡ್  ತನ್ನ ಕತ್ತಲ ಜಗತ್ತನ್ನು ಕಂಡು ಹೆದರಿ ಕೊಳ್ಳುತ್ತಿದ್ದನು.ಆಗ ಅವನ ಅಮ್ಮ ಬಂದು ಮಗನನ್ನು ತಬ್ಬಿಕೊಂಡು "ನಾನಿಲ್ಲಿದೀನಿ ಮಗು ,ನನಗೆ ಗೊತ್ತು ಕತ್ತಲ ಜಗತ್ತು ತುಂಬ ಹೆದರಿಕೆ ಉಂಟು ಮಾಡುತ್ತೆ.ನಿಲ್ಲೋದು ಕಷ್ಟ ಆಗುತ್ತೆ ,ಆದರೆ ನಾನು ಇಲ್ಲೆ ಇದೀನಿ "ಅಂತ ಧೈರ್ಯ ತುಂಬುತ್ತಿದ್ದಳು.ಆದರೆ ಅವನ ಅಕ್ಕ ಬಾರ್ಬರಾ ಆಗಲ್ಲ.ಡೇವಿಡ್ ಅವನ ಅಕ್ಕನನ್ನು ಏನಾದರೂ ತಂದುಕೊಡು ಎಂದು ಕೇಳಿದರೆ, "ಏ,ನಿನ್ನ ಕೆಲಸ ನೀನೆ ಮಾಡಿಕೊಳ್ಳುವುದನ್ನ ರೂಢಿ ಮಾಡ್ಕೋ ಯಾವಾಗಲೂ ನಿನ್ನ ಜೊತೆ ಯಾರಿರುತ್ತಾರೆ" ಎಂದು ಗದರಿಸುತ್ತಿದ್ದಳು.
            ತಂದೆ ಪ್ರಯತ್ನ ಪಡು ನೋಡೋಣ ಅನ್ನುತ್ತಿದ್ದರು. ತಾಯಿ ನಾನಿದೀನಿ ಮಗು ಅನ್ನುತ್ತಿದ್ದಳು.ಅಕ್ಕ ನಿನ್ನಕೆಲಸ ನೀನೆ ಮಾಡಿಕೊ ಅನ್ನುತ್ತಿದ್ದಳು.ಹೀಗೆ 3 ಜನರ ಮಧ್ಯ ಡೇವಿಡ್ ಬೆಳೆದನು.ಡೇವಿಡ್ ತನ್ನ ಚಿಕ್ಕ ವಯಸ್ಸಿನಿಂದಲೂ ತಾನು ಡಾಕ್ಟರ್ ಆಗಬೇಕು ಅಂದುಕೊಂಡಿದ್ದ.ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಅವನು ಕುರುಡರ ಶಾಲೆ ಬಿಟ್ಟು ಅದೇ ಊರಿನಲ್ಲಿರುವ ಶಾಲೆ ಸೇರಿಕೊಂಡನು. ಹಾಗೆ ಬೆಳಿತಾ ಬೆಳಿತಾ ತಾನು ಡಾಕ್ಟರ್ ಆಗಬೇಕು ಅನ್ನೋ ಹಠನೂ ಬೆಳೀತು.ಆದರೆ ಎರಡೂ ಕಣ್ಣು ಕಾಣದ ಕುರುಡ ಡಾಕ್ಟರ್ ಆಗೋದಕ್ಕೆ ಸಾಧ್ಯವಿಲ್ಲ ಅನ್ನೋದನ್ನ ಡೇವಿಡ್ ಗೆ ಹೇಳವು -ದು ಹೇಗೆ ಎಂದು ಮನೆಯವರೆಲ್ಲ ಕಂಗಾಲ -ದರು.ಆಗ ಅವನು ಸೇರಬೇಕಾದ ಕಾಲೇಜಿನ ಶಿಕ್ಷಕರಿಂದ ಹೇಳಿಸಿದರು. ಅದಕ್ಕೆ ಡೇವಿಡ್ ಹೇಳಿದ "ನೋಡಿ ನನಗೆ ಕಣ್ಣು ಕಾಣೋದಿಲ್ಲ ಅನ್ನೋದು ಬಿಟ್ಟರೆ ನಾನು ಬೇರೆಯವರಿಗಿಂತ ಕಡಿಮೆ ಇಲ್ಲ. ಎಲ್ಲರಿಗೂ ಒಂದಲ್ಲ ಒಂದು  ವೈಖಲ್ಯ ಇರುತ್ತೆ.ಜೀವನದಲ್ಲಿ ಏನನ್ನೂ ಸಾದಿಸದೆ,ವಿಶೇಷವಾಗಿ ಏನನ್ನೂ ಮಾಡದೆ ಇರುವವನೇ ಈ ಜಗತ್ತಿನ ನಿಜವಾದ ಅಂಗವಿಕಲ ಅಂತ ನಾನು ಭಾವಿಸಿದ್ದೇನೆ. ನಾನು ಒಬ್ಬ ಒಳ್ಳೆಯ ಮನೋರೋಗ ತಜ್ಞ ಆಗ್ತೀನಿ ಅಂತ ನನಗೆ ನಂಬಿಕೆ ಇದೆ. ದಯವಿಟ್ಟು ನನಗೆ ಕಾಲೇಜಿಗೆ ಅಡ್ಮಶನ್ ಕೊಡಿ"ಎಂದು ಕೇಳಿಕೊಂಡನು. ಆಗ ಅವನಿಗೆ ಕಾಲೇಜಿನಲ್ಲಿ ಅಡ್ಮಿಶನ್ ಸಿಕ್ಕಿತು. ಆ ಕಾಲೇಜಿನಲ್ಲಿ ನಾಲ್ಕು ವರ್ಷ ಓದಿ ನಿಜವಾದ ಪ್ರತಿಭಾವಂತ ವಿದ್ಯಾರ್ಥಿ ಅನ್ನಿಸಿಕೊಂಡ ಡೇವಿಡ್ ಎಲ್ಲರಿಗಿಂತ ಹೆಚ್ಚಿನ ಅಂಕಗಳನ್ನು ತೆಗೆದುಕೊಂಡನು.ಆದರೆ ಕುರುಡನಾದ ನನಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುತ್ತಾ ಅನ್ನೋ ಪ್ರಶ್ನೆ ಅವನನ್ನೂ ಕೂಡ ಕಾಡುತ್ತಿತ್ತು. 
          ಡೇವಿಡ್ ಹಾರ್ಟಮನ್ ಅಮೆರಿಕದ 10 ಮೆಡಿಕಲ್ ಕಾಲೇಜುಗಳಿಗೆ ಅರ್ಜಿ ಹಾಕಿದ್ದ.ಅದರಲ್ಲಿ 9 ಕಾಲೇಜುಗಳು ಅವನನ್ನ ತಿರಸ್ಕರಿಸಿದವು.ಆಗ ಡೇವಿಡ್ ನ ಕುರುಡು ಕಣ್ಣುಗಳಲ್ಲಿ ಮೊದಲ ಬಾರಿಗೆ ನಿರಾಶೆಯ ಕಣ್ಣೀರು ಸುರಿಯಿತು. ಎಲ್ಲಾ ಮುಗಿದು ಹೋಯಿತು ಅನ್ನೋ ಹಾಗೆ ಅತ್ತುಬಿಟ್ಟ
            ಅಮೆರಿಕಾದಲ್ಲಿ ಟೆಂಪಲ್ ಯುನಿವ -ರ್ ಸಿಟಿ ಆಫ್ ಮೆಡಿಶನ್ ಅನ್ನೋ ಸಂಸ್ಥೆ ಇತ್ತು. ಆ ಸಂಸ್ಥೆಯ ಅಸಿಸ್ಟೆಂಟ್ ಒಬ್ಬರು ಈ ಹುಡುಗನಿಗೆ ಒಂದು ಅವಕಾಶ ಕೊಡಬೇಕು ಅಂತ ವಾದಿಸಿದರು. ಅವತ್ತೇ ಮಧ್ಯಾಹ್ನ ಡೇವಿಡ್ ಅಕ್ಕ ಬಾರ್ಬರಾ ಅವನಿಗೆ ಫೋನ್ ಮಾಡಿ "ನೀನು ಸಾಧಿಸಿ ಬಿಟ್ಟೆ ಕಣೋ ನಿನಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಕ್ಕಿದೆ ಕಣೋ"ಎಂದು ತುಂಬ ಸಂತೋಷದಿಂದ ಹೇಳಿದಳು.ಆ ನಂತರ ಡೇವಿಡ್ ಹಾರ್ಟ್‍ಮನ್ ಕಷ್ಟಪಟ್ಟು ಮೆಡಿಕಲ್ ಓದಿದ.ರೋಗಿ ಗಳ ಬಾಯಿ ಕಣ್ಣು ಗಾಯಗಳನ್ನು ನೋಡೋಕೆ ಆಗುತ್ತಿರಲಿಲ್ಲ.ಅವರಿಗೆ ಪರೀಕ್ಷೆ ಮಾಡೋಕೆ ಆಗುತ್ತಿರಲಿಲ್ಲ.ಆದರೂ ಅವನ ಎದುರಿಗೆ ಕುಳಿತುಕೊಳ್ಳುತ್ತಿದ್ದ ರೋಗಿಗಳು ಅತ್ಯಂತ ಸ್ಪಷ್ಟವಾಗಿ ಅವನ ಮೇಲೆ ವಿಶ್ವಾಸ ಇಟ್ಟು ಅವನಿಗೆ ತಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು.ಡೇವಿಡ್ ಮೊದಲನೆಯ ರಾಂಕ ಪಡೆದು ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಿದ.
           ಒಂದು ದಿನ ಡೇವಿಡ್ ಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು.ಅವನಿಗೆ ತುಂಬ ಸಂತೋಷವಾಗಿತ್ತು.ಅಲ್ಲಿಯ ಪ್ರೊಫೆಸರ್ ಒಬ್ಬರು "ನಮ್ಮ ಡೇವಿಡ್ ಉಳಿದ ವಿದ್ಯಾರ್ಥಿಗಳಿಗಿಂತ ತುಂಬಾ ಡಿಫರೆಂಟ್ "ಅಂತ ಹೊಗಳಿದರು.ಅದಕ್ಕೆ ಡೇವಿಡ್ ಎದ್ದು ನಿಂತು "ಅಪ್ಪ ಹೇಳುತ್ತಿದ್ದುದು ನಿಜ ಅನ್ನಿಸುತ್ತೆ ಪ್ರಯತ್ನ ಪಟ್ಟು ನೋಡು ಪ್ರಯತ್ನ ಪಡೆದ ಹೊರತು ಅದು ಏನು ಅಂತ ಗೊತ್ತಾಗೋಲ್ಲ ಅಪ್ಪ ಹೇಳಿದ್ದು ಸರಿ"ಎಂದು ಹೇಳಿದನು.
            ಹೀಗೆ ಡೇವಿಡ್ ಪ್ರಯತ್ನ ಪಟ್ಟಿದ್ದಕ್ಕೆ ಡಾಕ್ಟರ್ ಆದ. ಅವನ ಪ್ರಯತ್ನಕ್ಕೆ ಪಲ ಸಿಕ್ಕಿತು ಸಾಧನೆ ಮಾಡಿದವರಿಗೆಲ್ಲಾ ಎಲ್ಲಾ ಅನುಕೂಲಗಳು ಇರುವುದಿಲ್ಲ. ಯಾವ ಅಡೆ ತಡೆಗಳು ಇದ್ದರೂ್ ಅದನ್ನು ನಿವಾರಿಸಿ ಮುನ್ನಡೆಯಬೇಕು. ಪ್ರಯತ್ನ ಪಟ್ಟು ಗುರಿ ಸೇರಬೇಕು.
                    
                       -- ಎ.ಆರ್.ಆಶಾ

ಲೇಖನ - ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ

     

"ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು" ಎನ್ನುವ ಮಾತು ಅಕ್ಷರಶಃ ಸತ್ಯ. ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅಪಾರ. ಮಗು ಹುಟ್ಟಿದ ದಿನದಿಂದಲೇ ಅಂದರೆ ತೊದಲು ನುಡಿಯುವುದರಿಂದ ಆರಂಭಿಸಿ ಮೊದಲ ಹೆಜ್ಜೆ ಇಡುವುದನ್ನು ಕಲಿಸಿಕೊಡುತ್ತಾಳೆ. ಮಾತು ಪ್ರಾರಂಬಿಸಿದಾಗಲೇ ಸಂಬಂಧಗಳ ಬಗ್ಗೆ ಅರಿವನ್ನು ಮೂಡಿಸುತ್ತಾಳೆ. ಅಂದರೆ ಅಪ್ಪ, ಅಜ್ಜಿ, ತಾತ, ಚಿಕ್ಕಪ್ಪ, ದೊಡ್ಡಪ್ಪ ಇತ್ಯಾದಿ. ಮಗುವಿನ ಬೆಳವಣಿಗೆಗೆ ತಂದೆ, ತಾಯಿಯ ಹಾಗು ಕುಟುಂಬಸ್ಥರ ನಡುವಳಿಕೆ ಬಹುಮುಖ್ಯ. ಆ ನಡವಳಿಕೆಯನ್ನೇ ಮಗು ಅನುಕರಿಸುತ್ತದೆ. ಆದ್ದರಿಂದ ತಾಯಿಯಾದವಳು ಕುಟುಂಬದ ಸದಸ್ಯರಿಗೆಲ್ಲಾ ಅರಿವನ್ನು ಮೂಡಿಸಿ ಮಗುವಿನ ಸಕಾರಾತ್ಮಕ ಬೆಳವಣಿಗೆಗೆ ಕಾರಣಳಾಗುವಳು. ಈ ದಿನಗಳಲ್ಲಿ ವಿಭಕ್ತ ಕುಟುಂಬಗಳು ಹಾಗು ಒಂದೇ ಮಗು ಇರುವ ಕುಟುಂಬಗಳಲ್ಲಿ ತಾಯಿಯು ಮಕ್ಕಳಿಗೆ ಗೆಳತಿಯಾಗಿಯೂ, ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಾಳೆ. 
ತಾಯಿಯಾದವಳು ಅಡುಗೆ ಮಾಡಿ ಬಡಿಸುವಳು ಹೌದು, ಚಂದಕೆ ಸಾಕುವಳು ಹೌದು, ಜೊತೆಗೆ ಅವಳು ನಿರ್ವಹಿಸುವ ಕೆಲಸಗಳು ಒಂದೆರಡಲ್ಲ, ಅಮ್ಮನೆಂದರೆ ಹಾಗೆಯೇ ನಿಜ. ಹಸಿವಾಗಿ ಹೊಟ್ಟೆ ಚುರುಗುಟ್ಟುವಾಗ ನೆನಪಾಗುವಳು ಅಮ್ಮ, ಆಡುವಾಗ ನೆಲಕ್ಕೆ ಬಿದ್ದು ಗಾಯಮಾಡಿಕೊಂಡಾಗಲು ಮೂಡುವ ಉದ್ಗಾರ ಅಮ್ಮ, ಭಯವಾದರೆ ಅಪ್ಪಿ ಸಂತೈಸುವಳು, ಅಳು ಬಂದರೆ ಕಣ್ಣೊರೆಸುವವಳು ಅವಳೇ, ಅಮ್ಮ ಇಷ್ಟೆಲ್ಲಾ ಕೆಲಸ ಮಾಡುತ್ತಾಳೆ. ಇದರ ಜೊತೆಗೆ ತುತ್ತು ಅನ್ನ ನೀಡುವವಳು, ಆರೋಗ್ಯದ ಅಂಕೆ ತಪ್ಪಿದಾಗ ಆರೈಕೆ ಮಾಡುವವಳು ಅವಳೇ. ಹೀಗೆ ಅಮ್ಮನ ಪಾತ್ರ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ.
     ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿಯ ಪಾತ್ರವೇ ಹಿರಿದು. ತಾಯಿಯು ಮಕ್ಕಳು ದೂರದರ್ಶನವನ್ನು ಹೆಚ್ಚು ನೋಡದಂತೆ ತಡೆದು, ಶಿಕ್ಷಣದ ಕಡೆಗೆ ಅವರ ಆಸಕ್ತಿಯನ್ನು ಬೆಳೆಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ, ಹಾಗೆಯೇ ಮಕ್ಕಳು ಓದಲು ಮೂಗು ಮುರಿದರೆ ಅವರಿಗೆ ಭವಿಷ್ಯದ ಚಿಂತನೆಯನ್ನು ತಿಳಿಸಿ ಅವರ ವ್ಯಕ್ತಿತ್ವ ರೂಪಿಸುವದರಲ್ಲಿ ಸಹಕಾರಿಯಾಗುತ್ತಾಳೆ. ಕೆಲವೊಮ್ಮೆ ಅಮ್ಮನು ಪೋಲೀಸ್ ತರಹ ವರ್ತಿಸಬೇಕಾಗುತ್ತದೆ, ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೋ ಎಂದು ಅವರನ್ನು ಹಿಂಬಾಲಿಸುವುದು, ಮೊಬೈಲ್ ಪರಿಶೀಲಿಸುವುದು, ಆಗೊಮ್ಮೆ ಈಗೊಮ್ಮೆ ಮಕ್ಕಳ ಕೋಣೆಯಲ್ಲಿ ಸುಳಿದಾಡುವುದರ ಮೂಲಕ ಮಕ್ಕಳು ಹಾದಿ ತಪ್ಪಿ ನಡೆಯುವುದನ್ನು ತಡೆಯುವವಳು ಅಮ್ಮನೇ.
          ಇಷ್ಟೆಲ್ಲಾ ಆರೈಕೆಯೊಂದಿಗೆ ಉತ್ತಮ ಜ್ಞಾನ, ಸಂಸ್ಕಾರ, ಕುಟುಂಬದ ಸಂಬಂಧಗಳ ಅನುಬಂಧವನ್ನು ಸಾಕ್ಷಾತ್ಕರಿಸುವ ವಿಶೇಷ ಶಕ್ತಿ ತಾಯಿಯಲ್ಲಿದೆ. ಇತರರೊಂದಿಗೆ ಹೋಲಿಕೆಗೆ ಆಸ್ಪದ ಕೊಡದೆ, ಪ್ರಾರ್ಥನೆ, ದೇಶಪ್ರೇಮ, ಪರಸ್ಪರ ಸಹಕಾರ, ಪ್ರೀತಿ, ಕೊಡುವ ಗುಣ, ಉಪಕಾರ ಸ್ಮರಣೆ ಮೊದಲಾದ ಮೌಲ್ಯಗಳೊಂದಿಗೆ ಮಕ್ಕಳ ನೈಜ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ಅವಳಲ್ಲಿದೆ.
       ತನ್ನ ಮಕ್ಕಳು ವಿದ್ಯಾವಂತರಾಗಿ ಉನ್ನತ ಸ್ಥಾನದಲ್ಲಿದ್ದು ತಮಗೆ ಹಿಂದೆ ಅಮ್ಮ ಹೇಳಿದ ಕಥೆ, ನೀತಿ ಪಾಠಗಳೇ  ಇಂದು ತಮ್ಮನ್ನು ಇಂತಹ ಉನ್ನತ ಮಟ್ಟದಲ್ಲಿ ನಿಲ್ಲಿಸಿದೆ ಎಂದಾಗ ತಾಯಿಗಾಗುವ ಆನಂದ ಅಷ್ಟಿಷ್ಟಲ್ಲ. ಹೀಗೆ ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ತಾಯಿಯ ಪಾತ್ರ ಅಪಾರ. ******
– ಅನುಪಮ ಪಿ

ನಗೆ ಬರಹ - ನಾನೂ ಬರೆದೆ


ಏನಾದ್ರೂ ಬರೆದು ನನ್ನ ಹೆಸರು ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನ ನೋಡಬೇಕೆನ್ನೋ ಆಸೆ ನೆರವೇರಿಸಿಕೊಳ್ಳಲು ಸುಮಾರು ಪ್ರಯತ್ನ ಮಾಡುತ್ತಲೇ ಇದ್ದೆ. ಆದ್ರೆ ಯತ್ನ ಫಲ ನೀಡುವ ಸೂಚನೆ ಕಾಣದೆ ಹೋದಾಗ ಖಂಡಿತ ನಿರಾಸೆ ಹೊಂದಲಿಲ್ಲ. ಎರಡು ದೊಡ್ಡ ಫ್ಲಾಸ್ಕ್ ತುಂಬಾ ಕಾಫಿ, ಒಂದಷ್ಟು ಕಡ್ಲೆಪುರಿ, ಕುಡಿಯಲು ನೀರು ಇಟ್ಕೊಂಡೆ.
ಎಲ್ಲಾ ರೆಡಿಯಾಯ್ತು....ಆದ್ರೆ ಬರೆಯೋದಕ್ಕೆ ಏನೂ ಹೊಳೆಯದಾಯ್ತು. ಪತ್ರಿಕೆಯೊಂದರಲ್ಲಿ ಸಾಹಸಪ್ರಧಾನ ಕಾದಂಬರಿಯೊಂದನ್ನ ಬರೆವಂತೆ ಹೇಳಿದ್ರು. ಇನ್ನೇನು ಬೇಕು, ಶುರು ಮಾಡಿಯೇ ಬಿಟ್ಟೆ. ತಲೆಯಲ್ಲಿ ವಿಷಯ ಓಡ್ತಿತ್ತು. ಪೆನ್ನೋ ಕೈ ಕೊಟ್ಟಿತ್ತು .
ಮತ್ತೊಮ್ಮೆ ಸಾಕಷ್ಟು ಪೆನ್ನು, ಹಾಳೆಗಳನ್ನ ಇಟ್ಕೊಂಡು ಏನಾದ್ರೂ ಬರೆಯಲೇಬೇಕಂತ ಕುಳಿತೆ. ಸಾಕಷ್ಟು ಯತ್ನದ ಕೊನೆಗೆ ಚುಟುಕವೊಂದನ್ನು ಬರೆದೆ. ಅದನ್ನು 'ಕ ಬು' ಎಂಬ ಹೊಸ ಪತ್ರಿಕೆಗೆ ಕಳಿಸಿದಾಗ ಪ್ರಪಂಚ ಗೆದ್ದಷ್ಟೇ ಖುಷಿಯಾಗಿತ್ತು. ತಿಂಗಳು, ವರ್ಷಗಳಾದರೂ ನನ್ನ ಬರಹ ಪ್ರಕಟವಾಗಲೇ ಇಲ್ಲ .
ಮದುವೆಯಾಗಿ 'ಮಕ್ಕಳಾಗಿ - ಮೊಮ್ಮಕ್ಕಳಾದರೂ ನನ್ನ ಬರೆವ ಬಯಕೆ ಬತ್ತಲಿಲ್ಲ. ಹನಿ ಮಿನಿ ಕವನವೊಂದನ್ನು ಹೊಸ ತ್ರೈಮಾಸಿಕ ಪತ್ರಿಕೆಯೊಂದಕ್ಕೆ ಕಳಿಸಿದೆ .
"ಮೇಲೆ ನೋಡು ಚಂದ್ರ ಬಿಂಬ 
ಕೆಳಗೆ ನೋಡು ಲೈಟ್ ಕಂಬ 
ನೀರಿನಲ್ಲಿ ಯಾರ ಬಿಂಬ 
ಕೈಯಲ್ಲಿದೆ ತಾಮ್ರದ ಚಂಬ."
ಇತ್ತೀಚೆಗಷ್ಟೇ ತಿಳಿದದ್ದು. ”ಅಸ್ವೀಕೃತ" ಪತ್ರಿಕೆ ನನ್ನ ಬರಹ ಪ್ರಕಟಿಸುವ ಮುನ್ನವೇ ನಷ್ಟವಾಗಿ ಬಾಗಿಲು ಮುಚ್ಚಿ, ಆ ಜಾಗದಲ್ಲಿ ಗುಜರಿ ಅಂಗಡಿ ಸ್ಥಾಪನೆಯಾಗಿದೆ ಅಂತ. 
ಇದೆಲ್ಲಾ ಆಗಿ ತಿಂಗಳೇ ಕಳೆದಿತ್ತು. ಅದೊಂದು ದಿನ ಲೇಖಕಿ ಟಿ ಸುನಂದಮ್ಮನವರ ಹಾಸ್ಯ ಬರಹವೊಂದನ್ನು ಓದುತ್ತ ಓದುತ್ತ ನಗುವುದರಲ್ಲೇ ತಲ್ಲೀನಳಾಗಿದ್ದಾಗ, ಮುಖದ ಮುಂದೆ ಅಡ್ಡ ಬಂದಿತು ಬಣ್ಣಬಣ್ಣದ ಪತ್ರಿಕೆ. "ಏ, ಛೆ" ಎಂದು ರೇಗುತ್ತಾ ತಲೆಯೆತ್ತಿದರೆ, ಅದೇ ತಾನೇ ಪತ್ರಿಕೋದ್ಯಮ ಮುಗಿಸಿ  ಅಪ್ರಕಟಿತ ಬರಹಗಳ ಪ್ರಕಟಿಸುವ "ಬರಹ" ಪತ್ರಿಕೆಯ ಸಹಸಂಪಾದಕಿಯಾಗಿದ್ದ ಮೊಮ್ಮಗಳು ತನುಜಾ ನನ್ನ ಬರಹ ಪ್ರಕಟಿಸಿ ತುಂಟನಗೆ ನಗುತ್ತಾ ನಿಂತಿದ್ದಾಳೆ. ನಿಜ ಹೇಳಬೇಕೆಂದರೆ ಅಂದು ಮೂಡಿದ ನಗೆ ಇಂದೂ ನನ್ನ ಮುಖದಲ್ಲಿ ಮಾಸಿಲ್ಲ!!
– ಕಾತ್ಯಾಯಿನಿ ಪಿ

ಪುಟ್ಕಥೆಗಳು -



ಅವರಿಬ್ಬರ ನಡುವೆ - ಹೆಪ್ಪುಗಟ್ಟಿದ ನೋವೆಲ್ಲ ಕರಗಿಹೋಯಿತು ಒಂದು ಹನಿ ಕಣ್ಣೀರಿನಲಿ, ವರುಷಗಟ್ಟಲೆ ಬೆಳೆದಿದ್ದ ಮೌನ ಮುರಿಯಿತು "ಕ್ಷಮಿಸು" ಎಂಬ ಒಂದೇ ಮಾತಿನಲಿ, ಬೆಳೆದಿದ್ದ ಕಂದಕ ಮುಚ್ಚಿಹೋಯಿತು ಒಂದು ಆತ್ಮೀಯ ಅಪ್ಪುಗೆಯಲ್ಲಿ!!  
*****
ಅವನನ್ನು ಅಣ್ಣನೆಂದು ನಂಬಿದ್ದಳು ಆಕೆ. ಅವನೇ ಅವಳ ಪಾಲಿಗೆ ಮುಳ್ಳಾಗುತ್ತಾನೆಂದು ಅವಳಿಗೇನು ಗೊತ್ತಿತ್ತು??!!   
 ****
ರಸ್ತೆಯಲ್ಲಿ ಎರಡು ದೃಶ್ಯಗಳು. ವ್ಯಕ್ತಿ ಅಪಘಾತಕ್ಕೆ ಒಳಗಾಗಿ ನೆರವು ಪಡೆಯಲು ವಿಫಲ ಯತ್ನ ನಡೆಸಿದ್ದಾನೆ. ಇನ್ನೊಂದೆಡೆ ವಿದ್ಯುತ್ ಗೆ ಸಿಲುಕಿ ಕೆಳಗೆ ಒದ್ದಾಡುತ್ತಾ ಇರುವ ಕಾಗೆಯ ಸುತ್ತ ಅದರ ದೊಡ್ಡ ಬಳಗವೇ ನೆರೆದಿದೆ !!
****
"ಅರೆನಿಮಿಷ ಪೊರಕೆ ಹಿಡಿದು ಫೋಟೊ ಪೇಪರ್ ನಲ್ಲಿ ಹಾಕಿಸಿಕೊಳ್ಳುವರಿಂದ ಭಾರತ ಸ್ವಚ್ಛವಾಗುವುದಿಲ್ಲ; ದಿನವೂ ಟನ್ ಗಟ್ಟಲೆ ಕಸ ತೆಗೆವ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ಕೊಡ್ರಪ್ಪ" ಕೂಗಿ ಕೂಗಿ ಹೇಳುತ್ತಿದ್ದರು ಗಾಂಧೀಜಿ. ಸ್ವಚ್ಛ ಭಾರತ ಅಭಿಯಾನದ ಅಬ್ಬರದ ಪ್ರಚಾರದಲ್ಲಿ ಅವರ ದನಿ ಅಧಿಕಾರಿಗಳಿಗೆ  ಕೇಳಿಸಲೇ ಇಲ್ಲ!!
****
ಪ್ರಯಾಣದುದ್ದಕ್ಕೂ ಜಾತಿ, ಅಂತಸ್ತಿನ ಬಗ್ಗೆ ಮಾತನಾಡುತ್ತಿದ್ದ ಆ ಯುವಕ. ರೈಲು ಕೆಟ್ಟು ನಿಂತಿತು, ಬೆಂಗಾಡಿನಲ್ಲಿ, ರಣಬಿಸಿಲಿನಲ್ಲಿ. ದಾಹದಿಂದ ಜೀವ ತಲ್ಲಣಿಸುತ್ತಿದ್ದಾಗ ಗುಡಿಸುವ ಹುಡುಗ ತನ್ನ ನೀರಿನ ಬಾಟಲಿ ಹಿಡಿದ!!
****
"ಅಲ್ಲಮ್ಮ. ಅಂದು ಅವಳಿಗಾಗಿ ನಿನ್ನ ಬಿಟ್ಟು ಹೋದಾಗ ಅತ್ತೆ. ಈಗ ನಾನವಳನ್ನು ಬಿಟ್ಟು ಬಂದಿದ್ದೇನೆ ಎಂದರೆ ಏಕೆ ನೊಂದುಕೊಳ್ಳುತ್ತಿದ್ದೀ?" ಕೇಳಿದ ಮಗ. "ಏಕೆಂದರೆ ಆ ನೋವು ಏನೆಂದು ನನಗೆ ಗೊತ್ತಪ್ಪ."
****
ಆತ ಕೈಕೊಟ್ಟನೆಂದು ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದಳು. ಪತ್ರ ಬರೆದಿಡುತ್ತಿರುವಾಗ ಹೊರಗಡೆ ಅಮ್ಮ ಯಾರಿಗೋ ಹೇಳುತ್ತಿರುವುದು ಕೇಳಿಸಿತು "ನನ್ನ ಮಗಳು ಎಂತಹ ಕಷ್ಟ ಬಂದರೂ ಎದುರಿಸುವಷ್ಟು ದಿಟ್ಟಳು." ಪೆನ್ ಜಾರಿ ಕೆಳಗೆ ಬಿತ್ತು!!
****
ಅಮ್ಮನನ್ನು ಕಳೆದುಕೊಂಡ ಅವನು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡ. ಅಪ್ಪ ಒಂದು ದಿನ ಅವನಮ್ಮ ಅವರಿಗೆ ಬರೆದಿದ್ದ ಪತ್ರವನ್ನು ಕೊಟ್ಟರು. "ನಮ್ಮ ಮಗ ಜಗತ್ತಿಗೆ ಬೆಳಕನ್ನು ಬೀರಬೇಕು ಎಂಬುದೇ ನನ್ನಾಸೆ" ಎಂದಿತ್ತು. ಮಗನ ಕಣ್ಣಲ್ಲಿ ಮಿಂಚು ಮೂಡಿತ್ತು!!
****
ಸಣ್ಣ ಮನಸ್ತಾಪ ಅವರಿಬ್ಬರಲ್ಲಿ. ದೂರ ಹೆಚ್ಚುತ್ತಾ ಹೋಯಿತು. ಸಂಬಂಧ ಇನ್ನೇನು ಸತ್ತೇ ಹೋಗುತ್ತದೆ ಎನ್ನವಾಗ ಮೌನ ಮುರಿಯಿತು. ಮತ್ತೆ ಅವರೀರ್ವರೀಗ ಆತ್ಮೀಯ ಸ್ನೇಹಿತರು!!
****
ಶಾಲೆಯಿಂದ ಮನೆಗೆ ಬಂದ ಮಕ್ಕಳಿಬ್ಬರು ತಂತಮ್ಮ ತಂದೆಯರನ್ನು "ಬೇರೆ ಧರ್ಮದವರು ಕೆಟ್ಟವರಂತೆ,  ಅವರೊಂದಿಗೆ ಮಾತಾಡಬಾರದಂತೆ ಹೌದಾ?" ಕೇಳಿದರು. ಅವರಿಬ್ಬರಿಗೂ ಉತ್ತರ ದೊರೆಯಿತು. ಒಬ್ಬ ಕೋಮುವಾದಿಯಾದ,  ಇನ್ನೊಬ್ಬ ಮಾನವತಾವಾದಿಯಾದ!
****
"ಅನಾಥಾಶ್ರಮದಲ್ಲಿಯೇ ನಾನು ಇದಕ್ಕಿಂತ ಚೆನ್ನಾಗಿಯೇ ಇರುತ್ತಿದ್ದೆ" ದತ್ತು ತಾಯ್ತಂದೆಯರ ತಿರಸ್ಕಾರಕ್ಕೆ ಒಳಗಾದ ಮಗು ಹೇಳಿತು!
****
ದಿನದಿನವೂ ಅವಳನ್ನು ಛೇಡಿಸುತ್ತಿದ್ದು ಒದೆ ತಿಂದ ಮೇಲೆಯೂ ಆ ಮಾನಗೆಟ್ಟ ಮನುಷ್ಯ ಹೇಳಿದ "ನನಗೆ ಗೊತ್ತು ಒಳ್ಳೆಯ ಜನ ಇದಕ್ಕಿಂತ ಹೆಚ್ಚು ಮುಂದೆ ಹೋಗಲಾರರು." ಅಷ್ಟೇ ಸಾಕಿತ್ತು ಅಗ್ನಿಪರ್ವತ ಸ್ಫೋಟವಾಗಲು. ಈಗವನು ಪೋಲೀಸರ ಅತಿಥಿ!!
****
"ಅವರಿಗೆ ಇಷ್ಟವಾಗೋಲ್ಲ ಅಂತ 20 ವರ್ಷಗಳ ನನ್ನ ನಿನ್ನ ಬಾಂಧವ್ಯವನ್ನು ಬಿಟ್ಟುಬಿಡುತ್ತಿದ್ದೀಯ. ಹೀಗೆ ಸಾಗಿದರೆ ಒಂದು ದಿನ ಎಲ್ಲರನ್ನೂ ಕಳೆದುಕೊಂಡುಬಿಡುವುದಿಲ್ಲವೇ?" ಕೇಳಿದ ತಮ್ಮ, ವಿವಾಹಿತ ಅಕ್ಕನನ್ನು. ಜ್ಞಾನೋದಯವಾಯಿತವಳಿಗೆ, ಮುಂದೆ ಯಾರನ್ನೂ ಕಳೆದುಕೊಳ್ಳಲಿಲ್ಲ ಅವಳು!!
****
ಅವರಿಬ್ಬರಲ್ಲಿ ದೋಷ ಇರಲಿಲ್ಲವೆಂದೇನೂ ಅಲ್ಲ, ಆದರೆ ಅವರು ತಮ್ಮಲ್ಲಿದ್ದ ಉತ್ತಮ ಅಂಶಗಳನ್ನೇ ಆ ಮಗುವಿಗೆ ಧಾರೆ ಎರೆದರು. ಈಗ ಆ ಮಗು ಅದ್ಭುತ ವ್ಯಕ್ತಿ!!
****
"ಹೋರಾಟ ಮಾಡಲೇಬೇಕೆ? ನನಗೇನೋ ನ್ಯಾಯ ಸಿಗುತ್ತದೆಂಬ ನಂಬಿಕೆಯಿಲ್ಲ" ಸ್ವಲ್ಪ ನಿರಾಶೆಯಿಂದಲೇ ನುಡಿದಳಾಕೆ. ತಕ್ಷಣವೇ ಗೆಳತಿ ನುಡಿದಳು "ಗೆಲುವು ಸೋಲು ನಂತರದ ಮಾತು, ಹೋರಾಟ ನಿನ್ನ ಅಸ್ತಿತ್ವದ ಸಂಕೇತ!!"
****
"ಬದುಕಲ್ಲಿ ಸೋತಿದ್ದೇನೆ, ಬದುಕಿಗಿಂತ ಸಾವೇ ಮೇಲೆನಿಸುತ್ತದೆ" ವಿಷಣ್ಣಳಾಗಿ ನುಡಿದಳಾಕೆ. "ಬದಲಾಯಿಸುವ ಪ್ರಯತ್ನ ಯಾವಾಗಲಾದರೂ ಮಾಡಿದ್ದೆಯಾ?" ಕೇಳಿದಳೀಕೆ. "ಆಗ ಅದರ ಅರಿವಿರಲಿಲ್ಲ, ಈಗ ಕಾಲ ಮುಗಿದಿದೆ." ಅರ್ಧ ಭಾಗ ಇನ್ನು ಉಳಿದಿದೆಯಲ್ಲಾ, ಪ್ರಯತ್ನಿಸಬಾರದೇಕೆ?" ಈಗವಳು ಮನಃಶಾಸ್ತ್ರಜ್ಞೆ!!
****
"ತಪ್ಪು ಮಾಡಿದೆನಮ್ಮ" 16 ವರ್ಷಕ್ಕೆ ವಿಧವೆಯಾದ ಮಗಳನ್ನು ಅಪ್ಪಿ ತಂದೆ ನುಡಿದರು "ಇನ್ನು ಮುಂದೆ ಈ ಎಲ್ಲಾ ಗೊಡ್ಡು ಸಂಪ್ರದಾಯಗಳಿಗೆ ಮುಕ್ತಾಯ. ನೀನು ನಿನಗಿಷ್ಟ ಬಂದಂತೆ ಬದುಕು ಮಗು!!"
****
"ಮೋಸ, ಮೋಸ, ಮೋಸ, ಎಲ್ಲೆಲ್ಲೂ ಮೋಸ" ಮನೆಗೆ ಬಂದು ಕೋಪದಿಂದ ಬ್ಯಾಗ್ ಬಿಸಾಕಿದ ಮಗನಿಗೆ ಅಮ್ಮ ಹೇಳಿದಳು "ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರಪ್ಪ!!"
****
"ಚಿನ್ನು, ನೀನು ಓದ್ತೀನಿ ಅಂದ್ರೆ ಈ ತಿಂಡಿಯೆಲ್ಲ ನಿನಗೇನೇ" 10ನೇ ತರಗತಿ ಓದುತ್ತಿದ್ದ ಮಗನನ್ನು ಪುಸಲಾಯಿಸಿದಳಾಕೆ. ಸ್ವಲ್ಪ ಹೊತ್ತಾದ ಮೇಲೆ "ಯಾಕೊ ಮಲಗಿದ್ದೀಯ, ಓದಲ್ವಾ?" ಕೇಳಿದಳು. "ಇಷ್ಟೊಂದು ತಿನಿಸಿ, ಓದು ಅಂದ್ರೆ ಹೇಗಮ್ಮ? ನಿದ್ರೆ ಬರ್ತಾ ಇದೆ, ನಾಳೆ ಓದ್ತೀನಿ!!" 
****
"ನಿನಗೇನಾದರೂ ಬುದ್ಧಿ ಇದೆಯೇನಮ್ಮ? ಅಜ್ಜಿಗೆ ಹುಷಾರಿಲ್ಲ ಎಂದರೂ ನನಗೇಕೆ ಫೋನ್ ಮಾಡಲಿಲ್ಲ?" ಕೂಗಾಡಿದನಾತ. "ನನ್ನ ನೋವು ಅರ್ಥ ಆಗಲಿ ಅಂತ. 2 ದಿನದಿಂದ ನಾನೂ ನಮ್ಮಮ್ಮನನ್ನು ನೋಡಲು ಆಸ್ಪತ್ರೆಗೆ ಹೋಗಬೇಕೂಂತಾ ಕೇಳುತ್ತಿಲ್ಲವೇ? ನನಗಿಬ್ಬರೂ ಬೇಕು. ನಿಮ್ಮಿಬ್ಬರ ಜಗಳದಲ್ಲಿ ನನ್ಯಾಕೆ ತರುತ್ತೀರಾ? " ಮರುಪ್ರಶ್ನಿಸಿದಳು ಮಗಳು. ನಿರುತ್ತರನಾದ ತಂದೆ!!
****
ಟಿವಿಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧದ ಮೆರವಣಿಗೆಯಲ್ಲಿ ಮಗಳನ್ನು ಕಂಡು ತಂದೆಗೆ ಆಘಾತವಾಯಿತು. "ಏನಮ್ಮ ಇದು, ಇಷ್ಟು ದಿನ ನನ್ನ ಮಾತನ್ನು ಮೀರದವಳು ಈಗ ......?" ಕೂಗಾಡಿದರು. "ಈ ಬಾರಿಯ ಮಹಿಳಾ ದಿನದ ಥೀಮ್ 'ಬದಲಾವಣೆಗೆ ಧೈರ್ಯವಾಗಿ ಮುಂದಡಿ ಇಡಿ' ಎಂದು" ಶಾಂತವಾಗಿ ಉತ್ತರಿಸಿದಳು ಮಗಳು!!
****
ಬದುಕಿನಲ್ಲಿ ತನಗೆ ಪ್ರಾಮುಖ್ಯತೆಯೇ ಇಲ್ಲವೆಂದುಕೊಂಡವಳು ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರದ ಕಡೆ ಹೋದಳು.  ಅಲ್ಲಿ ಅಕ್ಷರ ಬಾರದ ಮೀನುಗಾರ ಹೆಣ್ಣುಮಕ್ಕಳು ಸಂಘದ ಲೆಕ್ಕ ಅರ್ಥವಾಗದೆ ಒದ್ದಾಡುವುದನ್ನು ಕಂಡು ಸಹಾಯ ಮಾಡಿದಳು. ಎಲ್ಲರೂ ಅವಳನ್ನು ಸುತ್ತುವರೆದುಬಿಟ್ಟರು. ಈಗವಳು ಆ ಸಂಘದ ಮಾರ್ಗದರ್ಶಕಳು. ಇವಳು ಅವರಿಗೆ ನೆರವು ನೀಡಿದ್ದಾ ಅಥವಾ .........!!
****
"ಯಾಕೊ ದಿನಾಲೂ ಹೊಡೆಸಿಕೊಂಡು ಬರ್ತೀಯಾ, ತಿರುಗಿಸಿ ಒಂದು ಕೊಡಬಾರದಾ? ಆಗ ನೋಡು ಸುಮ್ಮನಾಗ್ತಾನೆ!" "ಮತ್ಯಾಕಮ್ಮ ನೀನು ಅಪ್ಪನಿಗೆ ತಿರುಗಿಸಿ ಕೊಡಬಾರದು?" ಪ್ರಶ್ನಿಸಿದ 4ನೇ ತರಗತಿಯ ಬಾಲಕ!!
****
"ನಮಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ ಅಂತ ಬೋರ್ಡ್ ಹಾಕಿದ್ದೀರಲ್ಲ, ನಾವೇ ಅಲ್ಲವೇ ಈ ದೇವಸ್ಥಾನವನ್ನು ಕಟ್ಟಿಕೊಟ್ಟದ್ದು?" ಪ್ರಶ್ನಿಸಿದನಾತ!!
****
ಮಹಿಳಾ ದಿನದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ಬಿದ್ದರೂ ಬಹುಮಾನ ಗಳಿಸಿದಳಾಕೆ. "ಇದು ಬೇಕಿತ್ತಾ ನಿನಗೆ?" ಪತಿಯ ಪ್ರಶ್ನೆ. "ಅಡಿಗೆಮನೆಯಲ್ಲಿ ಮೊನ್ನೆ ನನ್ನ ಕೈಸುಟ್ಟಾಗ ಈ ರೀತಿ ಕೇಳಲೇ ಇಲ್ಲ?" ಕೂಲಾಗಿ ಕೇಳಿದಳಾಕೆ!!
- ಸುಧಾ ಜಿ

ಚುಟುಕುಗಳು -


ಯೋಚನೆ ಒಳ್ಳೆಯದಿರಲಿ
ಮನಸ್ಸು ಶುದ್ಧವಿರಲಿ
ಗಮನ ಒಳ್ಳೆಯ ಕಡೆ ಇರಲಿ
ದಿನಗಳು ನಗುತ್ತಾ ಬರಲಿ
ನಮ್ಮ ಸಾಹಿತ್ಯ ವೇದಿಕೆ
ವಾರವಾರವು ಸದಸ್ಯೆಯರಿಂದ ತುಂಬುತ್ತಿರಲಿ.

ನಮ್ಮ ಮನೆಯ ಬೆಕ್ಕಿನ ಹೆಸರು ಟಿಕ್ಕು
ಅದು ಇದ್ದರೆ ನಮ್ಮ ಮನೆಗೆ ಲಕ್ಕು
ಹಾಲು ಕುಡಿದು ಹೆಚ್ಚಾಯಿತು ಅದರ ಸೊಕ್ಕು
ಅದಕ್ಕೆ ಓಡಿಸಿದೆನಾ ಬೆಕ್ಕು 
– ಅರುಣ ಎಂ

ಚುಟುಕು -


ಓ ಬಾನೆ
ಸೂರ್ಯೋದಯದಲಿ ನೀನು  ಕೆಂಬಣ್ಣ
ನಡುನಡುವೆ ತಿಳಿನೀಲಿ ಕಡುನೀಲಿಯ ಬಣ್ಣ
ಸಂಜೆಯಲಿ ನಿನ್ನದೊ ಬಂಗಾರದ ಬಣ್ಣ
ಅಸ್ತಮಿಸುವಾಗ  ನೀನಾಗುವೆ ಕಡುಕೆಂಪು ಬಣ್ಣ
ನಿನ್ನೊಡಲಲಿ ಅಡಗಿದೆಯೊ ಇನ್ನೆಷ್ಟು ವಿಧದ ಬಣ್ಣ.


ಮಮತೆಯ ಉಣಿಸುವಳು
ಪ್ರೀತಿಯ ತೋರಿಸುವಳು
ನೋವೆಲ್ಲಾ ಮರೆಸುವಳು
ಕೈ ಹಿಡಿದು ನಡೆಸುವಳು
ನನಗೆ ಜನ್ಮ ಕೊಟ್ಟವಳು.


ಅಂದುಕೊಂಡಂತೆ ಬದುಕಿಲ್ಲ
ಎಣಿಸಿದಂತೆ ಜಗವಿಲ್ಲ
ನೀನು ನೀನಾಗಿಯೆ
ಉಳಿಯುವುದು ಸಾಧನೆಯಿದ್ದಂತೆ
ಆಗದಿದ್ದಾಗ ಇದ್ದರೂ ಸತ್ತಂತೆ.


ಕೈಗೊಂಡಿದ್ದೆವು ನಾವೆಲ್ಲಾ ಒಂದು ಪ್ರವಾಸ
ನಮಗಾಗಿತ್ತು ಇದರಿಂದ ಸಂತಸ
ನಮ್ಮೆಲ್ಲರಲ್ಲಿಯೂ ತುಂಬಿತ್ತು ವಿನೋದ
ಯಾರಲ್ಲಿಯೂ ಇರಲಿಲ್ಲ ಭೇದ
ಬಸ್ಸಿನೊಳಗೆ ಸಾಗಿತ್ತು ಇಂಪಾದ ಗಾನ
ಸಂತೋಷದಿಂದ ಸಾಗಿತ್ತು ನಮ್ಮ ಯಾನ.


ಬದುಕೊಂದು ಹೋರಾಟ
ಕೆಲವರೆನ್ನುವರು ವಿಧಿಯಾಟ
ಬೇಕಿಲ್ಲ ಕೂಗಾಟ ಹಾರಾಟ
ಸರಿಯಾಗಿ ಸವಿದಾಗ ರಸದೂಟ
ಆಗ ಸಿಗುವುದು ಗೆಲುವಿನ ಓಟ.

- ಗೀತಾ ಕೆ 


ಲೇಖನ - ತ್ಯಾಜ್ಯ


ಕೈ- ಕೈ ಎಲ್ಲೋಯ್ತು?
ಕಸದ ಮೂಲೆಗೆ ಹೋಯ್ತು.
ಕಸದ ಮೂಲೆ ಏನು ಕೊಡ್ತು?
ಕಸ ಕೊಡ್ತು. ಕಸ ಏನ್ಮಾಡ್ದೆ?
ತಿಪ್ಪೆಗೆ ಹಾಕ್ದೆ. ತಿಪ್ಪೆ ಏನು ಕೊಡ್ತು ?
ಗೊಬ್ಬರ ಕೊಡ್ತು.  ಗೊಬ್ಬರ ಏನ್ಮಾಡ್ದೆ?
ಗದ್ದೆಗೆ ಹಾಕಿದೆ. ಗದ್ದೆ ಏನು ಕೊಡ್ತು?
ಭತ್ತ ಕೊಡ್ತು. ಭತ್ತ ಏನು ಕೊಡ್ತು?
ಅಕ್ಕಿ ಕೊಡ್ತು. ಅಕ್ಕಿ ಏನ್ಮಾಡ್ದೆ?
ಅನ್ನ ಮಾಡಿ ಊಟ ಮಾಡ್ದೆ.
     ಬಾಲ್ಯದಲ್ಲಿ ಅಜ್ಜಿ ಹಾಡು ಮತ್ತು ಆಟದ ಮೂಲಕ ಕಸವನ್ನು ಎಲ್ಲಿಹಾಕಬೇಕು ಮತ್ತು ಅದರ ಪ್ರಯೋಜನವನ್ನು ತಿಳಿಸುತ್ತಿದ್ದರು. ಆಗ ಪ್ಲಾಸ್ಟಿಕ್‍ನ ಬಳಕೆ ಇರಲಿಲ್ಲ. ಅಂಗಡಿಯಲ್ಲಿ ದಿನಸಿ, ಪೆಪ್ಪರ್ಮೆಂಟ್ ಮತ್ತು ಕಡಲೆಪುರಿ, ಇವೆಲ್ಲವನ್ನು ಕಾಗದದಲ್ಲಿ ಕಟ್ಟಿಕೊಡುತ್ತಿದ್ದರು.  ಎಣ್ಣೆಯನ್ನು ಗಾಜಿನ ಶೀಶೆಯಲ್ಲಿ ತರುತ್ತಿದ್ದರು. ಹೋಟೆಲ್ ತಿಂಡಿಯನ್ನು ಎಲೆ ಮತ್ತು ದೊನ್ನೆಯಲ್ಲಿ ಕೊಡುತ್ತಿದ್ದರು.  ಇದನ್ನೆಲ್ಲಾ ತರಲು ನಾವು ಹೊಲೆದ ಬಟ್ಟೆಯ ಚೀಲವನ್ನು ಕೊಂಡೊಯ್ಯುತ್ತಿದ್ದೆವು.  ಮದುವೆ ಸಮಾರಂಭಗಳಲ್ಲೂ ಎಲೆ ಮತ್ತು ದೊನ್ನೆಯನ್ನು ಬಳಸುತ್ತಿದ್ದರು.  ಪ್ರಯಾಣದಲ್ಲಿ ನೀರನ್ನು ರೈಲುಚೆಂಬು ಮತ್ತು ಆಹಾರವನ್ನು ಡಬ್ಬಿಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದರು.  ಆಹಾರವನ್ನು ಎಲೆ ಮೇಲೆ ಹಾಕಿಕೊಂಡು ತಿನ್ನುತ್ತಿದ್ದರು.  ಅಡಿಗೆ ಮನೆಯಲ್ಲಿನ ತರಕಾರಿ ಮತ್ತು ಹಣ್ಣಿನ ಸಿಪ್ಪೆ, ಎಲ್ಲಾ ದನ ಕರುಗಳಿಗೆ ಆಹಾರವಾಗುತ್ತಿತ್ತು.  ಉಳಿದ ಅನ್ನಾಹಾರವನ್ನು ನಾಯಿ, ಬೆಕ್ಕಿಗೆ ಹಾಕುತ್ತಿದ್ದರು.  ಕಾಗದ ರಟ್ಟಿನ ಚೂರು, ಕರಟ, ತೆಂಗಿನ ಮಟ್ಟೆ ಮುಂತಾದುವುಗಳನ್ನು ಒಲೆ ಉರಿಸಲು ಬಳಸುತ್ತಿದ್ದರು.  ಹತ್ತಿ ಬಟ್ಟೆ ಧರಿಸುತ್ತಿದ್ದರಿಂದ ಹರಿದ ಮೇಲೂ ಸ್ವಚ್ಚಗೊಳಿಸಲು ಬಳಸುತ್ತಿದ್ದರು. ಇನ್ನಿತರ ಕಸವನ್ನು ಒಂದೆಡೆ ಹಾಕಿ ಗೊಬ್ಬರವಾದಾಗ ಅದನ್ನು ಹೊಲ ಗದ್ದೆಗೆ ಹಾಕಿ ಫಸಲನ್ನು ತೆಗೆಯುತ್ತಿದ್ದರು.  ಗೋಣಿ ದಾರ, ನೂಲಿನ ಹಗ್ಗವನ್ನು ಹಾಗೂ ತೆಂಗಿನ ನಾರಿನ ಹುರಿ ಬಳಸುತ್ತಿದ್ದರು. ಈ ಎಲ್ಲಾ ತ್ಯಾಜ್ಯಗಳು ಬೆಂಕಿಗೆ ಹಾಕಿದರೆ ಬೂದಿಯಾಗುವಂತಹದ್ದು ಮತ್ತು ಮಣ್ಣಿನಲ್ಲಿ ಕೊಳೆಯುವಂತಹದ್ದು.   
   ಈಗ ಚಾಕಲೇಟ್ ಬಿಸ್ಕೆಟ್ ಕೊಂಡರೆ ಅದಕ್ಕೆ ಸಿಲ್ವರ್ ಪೇಪರ್, ಪ್ಲಾಸ್ಟಿಕ್ ಪೌಚ್, ಅದರ ಮೇಲೆ ಪ್ಲಾಸ್ಟಿಕ್ ರ್ಯಾಪರ್ ಹಾಕಿರುತ್ತಾರೆ.  ಎಣ್ಣೆ, ದಿನಸಿ ಮುಂತಾದವನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ಕೊಡುತ್ತಾರೆ. ಹೋಟೆಲ್ ತಿಂಡಿಯನ್ನು ಪ್ಲಾಸ್ಟಿಕ್ ಹಾಳೆ ಮತ್ತು ಕವರ್‍ನಲ್ಲಿ ಕೊಡುತ್ತಾರೆ.  ರೆಡಿಮೇಡ್ ಶರ್ಟ್ ಕೊಂಡರೆ ಅದಕ್ಕೆ ಪ್ಲಾಸ್ಟಿಕ್ ಕಾಲರ್, ನೆಕ್ ಪೀಸ್, ಕ್ಲಿಪ್‍ಗಳು ಮತ್ತು ಗುಂಡು ಸೂಜಿಗಳನ್ನು ಹಾಕಿರುತ್ತಾರೆ.  ಈಗ ಮದುವೆ ಸಮಾರಂಭಗಳಲ್ಲಿ ಮತ್ತು ದೂರ ಪ್ರಯಾಣದಲ್ಲಿ ಆಹಾರವನ್ನು ಹಾಕಿಕೊಂಡು ತಿನ್ನಲು, ಪ್ಲಾಸ್ಟಿಕ್ ತಟ್ಟೆ, ಪಾನೀಯಗಳನ್ನು ಕುಡಿಯಲು ಪ್ಲಾಸ್ಟಿಕ್ ಲೋಟ, ಅಂಗಡಿ ಮತ್ತು ಮಾಲ್‍ಗಳಲ್ಲಿ ಕೊಡುವ ಪ್ಲಾಸ್ಟಿಕ್ ಚೀಲಗಳು, ದನಗಳಿಗೆ ಹಾಕದ ಹಣ್ಣು ಮತ್ತು ತರಕಾರಿ ಸಿಪ್ಪೆ ಕಸವನ್ನು ಹೆಚ್ಚಿಸುತ್ತಿದೆ. ಮತ್ತೆ ಬಳಸಲು ಆಗದ ಸಿಂಥೆಟಿಕ್ ಬಟ್ಟೆ ಮತ್ತು ಸೀರೆ ಚೂರುಗಳು ರಸ್ತೆಯಲ್ಲಿ ಹಾರಾಡುತ್ತಿವೆ. ಉಳಿದ ಆಹಾರವನ್ನು ಬೀದಿಯ ಬದಿಯಲ್ಲಿ ಹಾಕುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ಪ್ಲಾಸ್ಟಿಕ್ ದಾರ, ಪಟ್ಟೆ ದಾರ ರಸ್ತೆಯಲ್ಲಿ ಬಿಸಾಕುವುದರಿಂದ ನಡೆಯುವವರ ಕಾಲಿಗೆ ಸಿಕ್ಕಿ ಎಡವಿ ಬೀಳುವಂತೆ ಮಾಡುತ್ತಿದೆ. ಪ್ಲಾಸ್ಟಿಕ್ ಚೀಲಗಳು ದನಕರುಗಳ ಹೊಟ್ಟೆಗೆ ಸೇರಿ ಅವುಗಳ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತಿದೆ. 
     ಈ ತ್ಯಾಜ್ಯವು ಮಣ್ಣಿನಲ್ಲಿ ಕೊಳೆಯುವಂತಹದ್ದಲ್ಲ. ಇದನ್ನು ಬೆಂಕಿಗೆ ಹಾಕಿದಾಗ ಕೆಟ್ಟ ವಾಸನೆ ಹಾಗೂ ಹೊಗೆ ಹರಡಿ ಪರಿಸರ ಕೆಡುತ್ತದೆ. ಸಾಧ್ಯವಾದಷ್ಟೂ ಹಿಂದಿನ ಕ್ರಮವನ್ನೇ ಅನುಸರಿಸಿದರೆ ಈಗಲೂ ಪ್ಲಾಸ್ಟಿಕ್ ಹಾವಳಿಯನ್ನು ತಪ್ಪಿಸಬಹÅದು. ಜೊತೆಗೆ ಅನಿವಾರ್ಯವಾದಾಗ ಪುನಃ ಪುನಃ ಬಳಸುವುದರಿಂದ, ಕಡಿಮೆ ಬಳಕೆ ಮತ್ತು ಪುನರ್ ಸಂಸ್ಕರಿಸಿ ಬಳಸಲು ಪ್ರಯತ್ನಿಸಬಹುದು. ಪ್ಲಾಸ್ಟಿಕ್ ಸಮಸ್ಯೆಯನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡಬಹುದು.
 ಪಾರ್ವತಾತಾಯಿ

ಲಘು ಬರಹ - 1


ಅಡುಗೆ ಮನೆಯಲ್ಲಿ ಮನೆಯಾಕೆ ಮಧ್ಯಾಹ್ನದ ಅಡುಗೆ ಸಿದ್ಧಪಡಿಸಲು ಬಂದಳು. ಅನ್ನ ಮತ್ತು ರಸಂ ಮಾಡಿದರೆ ಸಾಕು ಎಂದುಕೊಂಡಳು. ಕುಕ್ಕರ್ ನಲ್ಲಿ ಅನ್ನಕ್ಕಿಟ್ಟು, ರಸಂ ಮಾಡಲು ರಸಂ ಪುಡಿಯ ಡಬ್ಬ ತೆಗೆದಾಗ ಅದು ಖಾಲಿಯಾಗಿತ್ತು. ಪುಡಿ ಮಾಡಲು ಬೇಕಾದ ಒಣಮೆಣಸಿನಕಾಯಿ, ಮೆಣಸು, ಜೀರಿಗೆ ಅರಿಶಿಣ ಮತ್ತು ಧನಿಯ ಎಲ್ಲವನ್ನು ಮೇಜಿನ ಮೇಲಿಟ್ಟಳು.
   ಕಾಲಿಂಗ್ ಬೆಲ್ ಸದ್ದಾಗಲು ಬಾಗಿಲನ್ನು ತೆಗೆಯಲು ಹೋದಳು. ಆಕೆಯ ಗೆಳತಿ ಬಂದಿದ್ದಳು. ಅವರಿಬ್ಬರು ಹಾಗೆಯೇ ಮಾತಿಗೆ ಕುಳಿತರು. ಈ ಕಡೆ ಅಡಿಗೆಮನೆಯಲ್ಲಿ ಮೇಜಿನ ಮೇಲಿದ್ದ ಸಾಮಗ್ರಿಗಳು ಮಾತನಾಡಲು ಪ್ರಾರಂಭಿಸಿ ನಾ ಹೆಚ್ಚು ನಾ ಹೆಚ್ಚು ಎಂದು ಹೇಳತೊಡಗಿದವು.
  ಮೊದಲು ಅರಿಶಿಣವು ಹೇಳಿತು,  ಕೆಮ್ಮು, ನೆಗಡಿ, ಗಂಟಲು ನೋವು ಬಂದಾಗ ನನ್ನನ್ನು ಬಿಸಿಹಾಲಿಗೆ ಹಾಕಿ ಜೇನುತುಪ್ಪ ಸೇರಿಸಿ ಕುಡಿದರೆ ಹಿತವೆನಿಸುತ್ತದೆ. ಅಲ್ಲದೆ ನನ್ನನ್ನು ಸಾಂಬಾರಿಗೆ ಪದಾರ್ಥ ವಾಗಿಯು ಬಳಸುತ್ತಾರೆ ಹಾಗು ಪೂಜೆ ಮತ್ತು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ ಎಂದು.
  ನಂತರ ಮೆಣಸು ಹೇಳಿತು ನಾನು ಗುಂಡಾಗಿ, ಕಪ್ಪಾಗಿರುವೆ ನನ್ನನ್ನು ಸಹ ಸಾಂಬಾರಿಗೆ ಪದಾರ್ಥವಾಗಿ ಬಳಸುತ್ತಾರೆ. ಕೆಮ್ಮು ಮತ್ತು ಕಫದ ನಿವಾರಣೆಗೆ ಜೇನುತುಪ್ಪದೊಂದಿಗೆ ಪುಡಿ ಮಾಡಿ ಸೇವಿಸುವರು. ಹಾಗು ನನ್ನನ್ನು ಅರೆದು ಮೊಡವೆಗೆ ಹಚ್ಚಿದರೆ ಬೇಗನೆ ಮೊಡವೆ ಒಣಗಿ ಹೋಗುವುದು.
  ಜೀರಿಗೆ ನಾನು ಸಣ್ಣಗೆ ಉದ್ದವಾಗಿರುವೆ ನನ್ನನ್ನು ಸಹ ಸಾಂಬಾರಿಗೆ ಪದಾರ್ಥವನ್ನಾಗಿ ಉಪಯೋಗಿಸುತ್ತಾರೆ. ನನ್ನನ್ನು ಕಷಾಯವನ್ನಾಗಿ ಮಾಡಿ ಕುಡಿದರೆ ಅಸಿಡಿಟಿ ನಿವಾರಣೆಯಾಗುತ್ತದೆ. ಮತ್ತು ದೇಹಕ್ಕೆ ತಂಪನ್ನು ನೀಡುತ್ತೇನೆ ಎಂದಿತು.
  ಧನಿಯಾ  ಹೇಳಿತು ನನ್ನನ್ನು ಸಹ ಸಾಂಬಾರಿಗೆ ಪದಾರ್ಥವನ್ನಾಗಿ ಉಪಯೋಗಿಸುವರು. ನನ್ನ ಕಷಾಯವನ್ನು ಕುಡಿದರೆ ಪಿತ್ತವು ಶಮನವಾಗುತ್ತದೆ.
  ಇಲ್ಲಿಯವರೆಗೆ ಸುಮ್ಮನ್ನಿದ್ದ ಒಣಮೆಣಸಿನಕಾಯಿ, ನಾನು ನಿಮಗೆಲ್ಲರಿಗೂ ದೊಡ್ಡವನು ನಾನಿಲ್ಲದೆ ಖಾರವಿಲ್ಲ. ಊಟಕ್ಕಾಗಲಿ, ತಿಂಡಿಗಾಗಲಿ ನಾನು ಬೇಕೇ ಬೇಕು ಎಂದಿತು.
  ಚರ್ಚೆ ಹೀಗೆ ಸಾಗುತ್ತಲೇಯಿತ್ತು. ಸ್ವಲ್ಪ ಸಮಯದ ನಂತರ ಎಲ್ಲರು ಸೇರಿ ಒಂದು ನಿರ್ಧಾರಕ್ಕೆ ಬಂದರು. ನಮ್ಮಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಲ್ಲರೂ ಕೈಯಲ್ಲಿರುವ ಬೆರಳಿನಂತೆ.ಒಂದೇ ಪದಾರ್ಥದಿಂದ ಸಾಂಬಾರು  ಮಾಡಲಾಗುವುದಿಲ್ಲ. ಎಲ್ಲವನ್ನು ಸರಿಯಾದ ಪ್ರಮಾಣದಲ್ಲಿ ಹಾಕಿ ಹುರಿದು ಪುಡಿ ಮಾಡಿ, ಉಪಯೋಗಿಸಿದಾಗ ಮಾತ್ರ ಸಾಂಬಾರು ರುಚಿಯಾಗುತ್ತದೆ ಎನ್ನುವ ನಿರ್ಧಾರವನ್ನು ತೆಗೆದುಕೊಂಡವು.
  ಅಷ್ಟರಲ್ಲಿ  ಮನೆಯಾಕೆ ಬಂದಳು ತುಂಬಾ ತಡವಾಯಿತೆಂದು ಬೇಗ ಬೇಗ ಎಲ್ಲ ಪದಾರ್ಥಗಳನ್ನು ಹಾಕಿ ಹುರಿದು ಪುಡಿ ಮಾಡಿ ರಸಂ ಮಾಡಿದಳು.
  ಹೀಗೆ ಅಡುಗೆಯಲ್ಲಿ ಉಪ್ಪು, ಹುಳಿ, ಕಾರ ಹಾಗು  ಸಿಹಿ ಎಲ್ಲ ಸರಿಯಾದ ಪ್ರಮಾಣದಲ್ಲಿದ್ದಲ್ಲಿ ಊಟದ ರುಚಿ ಸರಿಯಾಗಿರುತ್ತದೆ. ಹಾಗೆಯೇ  ಜೀವನದಲ್ಲೂ ಸಹ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಚಿತ್ತದಿಂದ ಎದುರಿಸಿದರೆ ಬದುಕು ಸುಂದರವೆನಿಸುತ್ತದೆ.
- ಮಧುಮತಿ ಎಂ ಎಸ್

ಅಂತರಂಗದ ದನಿ - 1


ನನ್ನ ತವರುಮನೆಯಲ್ಲಿ ನಮ್ಮದು ದೊಡ್ಡ ಕುಟುಂಬ. ತಂದೆಯೊಂದಿಗೆಅವರ ತಾಯಿ , ಅಣ್ಣ , ತಮ್ಮ, ಅಕ್ಕ, ತಂಗಿ ಎಲ್ಲರು ಒಟ್ಟಿಗೆ ಒಂದೇ ಮನೆಯಲ್ಲಿ ಇದ್ದರು. ವ್ಯವಸಾಯವೇ ನಮ್ಮ ಮನೆಯಲ್ಲಿ ಪ್ರಧಾನವಾಗಿತ್ತು. ನಮ್ಮ ತಂದೆಗೆ ದಿನದಲ್ಲಿ ಒಂದು ನಿಮಿಷವು ವಿರಾಮವಿರಲಿಲ್ಲ. ಜಮೀನಿನಲ್ಲಿಯೇ ಇರುತ್ತಿದ್ದರು. ಉಳಿದವರು ತಮ್ಮ ಕೆಲಸವನ್ನು ಇವರಿಗೆ ನೇಮಿಸಿ   ಮನೆಯಲ್ಲಿಯೇ ಕಾಲಹರಣ ಮಾಡಿಕೊಂಡಿದ್ದರು. ನಮ್ಮ ತಂದೆಯವರು ಯಾವುದಕ್ಕೂ ಮಾತನಾಡದೆ ಗಾಣದ ಎತ್ತಿನಂತೆ ದುಡಿಯುತ್ತಿದ್ದರು. ಯಾವ ವಿಷಯಕ್ಕೂ ಮನೆಯಲ್ಲಿ ಜೋರಾಗಿ ಮಾತನಾಡುತ್ತಿರಲಿಲ್ಲ. ಸಂಸಾರದ ವಿಷಯದಲ್ಲಿ ಎಲ್ಲರಿಗೂ ತಲೆಬಾಗಿ ಸೋಲುತಿದ್ದರು. ನನಗೆ ಅವರ ವರ್ತನೆ ಅರ್ಥವೇ ಆಗುತ್ತಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಇವರಿಗಿರಲಿಲ್ಲಾ. ಆಗ ನಾನು ಚಿಕ್ಕವಳಾದರು ಎಲ್ಲಾ ವಿಷಯವು ಗೊತ್ತಾಗುತ್ತಿದ್ದರೂ ಮಾತನಾಡುವ ಧೈರ್ಯವಿರಲಿಲ್ಲ. ನಮ್ಮ ಬಂಧು- ಬಳಗದವರು ನಮ್ಮ ತಂದೆಯನ್ನು ಬಹಳವಾಗಿ ಗೌರವಿಸುತ್ತಿದ್ದರು. ಒಟ್ಟಿನಲ್ಲಿ  ಸಂಸಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರೂ ಸಹ ಮನೆಯಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ದುಡಿಯುವುದೇ ಅವರ ಗುರಿಯಾಗಿತ್ತು. ಕಾಲ ಕಳೆದು ನನಗೂ ಮದುವೆಯಾಗಿ ಮಕ್ಕಳು, ಸೊಸೆ , ಮೊಮ್ಮಕ್ಕಳು ಇರುವರು. ಈಗಲೂ ನನಗೆ ಹಿಂದಿನ ನೆನಪುಗಳು ಕಾಡುತ್ತಿರುತ್ತವೆ. ಏಕೆ ನನ್ನ ತಂದೆ ಜೀವನದಲ್ಲಿ  ಬಹಳ ಕಷ್ಟ ಪಟ್ಟರಲ್ಲ. ಆ ನೋವನ್ನೆಲ್ಲಾ ಅವರು ಹೇಗೆ  ಸಹಿಸಿಕೊಂಡಿದ್ದರು ಎಂದು ನನ್ನ ಅಂತರಂಗ ಈಗಲೂ ಕೂಗಿ ಕೇಳುತ್ತಿದೆ. ಆದರೆ ಅದಕ್ಕೆ ಉತ್ತರಕೊಡಲು ನನ್ನ ತಂದೆ ಈ ಲೋಕದಲ್ಲೇ ಇಲ್ಲ. ನನ್ನ ಪ್ರಶ್ನೆ ನನ್ನಲ್ಲಿಯೇ ಉಳಿದುಕೊಂಡುಬಿಟ್ಟಿದೆ....

 - ಲೀಲಾವತಿ

ಸಿನಿಮಾ ವಿಮರ್ಶೆ – ರಂಗನಾಯಕಿ


"ಅಶ್ವತ್ಥ" ರವರ ಕಾದಂಬರಿ ಆಧಾರಿತವಾಗಿ "ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ ನಿರ್ಮಾಪಕ "ಬಿ. ತಿಮ್ಮಣ್ಣರವರ" "ಮಂಗಳ ಮೂವೀಸ್ " ನ ನಿರ್ಮಾಣದೊಂದಿಗೆ 1981 ರಲ್ಲಿ ತೆರೆಕಂಡು "ಅತ್ಯುತ್ತಮ ಚಲನಚಿತ್ರ" ಪ್ರಶಸ್ತಿಯನ್ನು ಪಡೆದ ಚಲನಚಿತ್ರ "ರಂಗನಾಯಕಿ". ಆರತಿ, ಅಶೋಕ್, ಅಂಬರೀಶ್ ಮೊದಲಾದವರ ತಾರಾಗಣದಲ್ಲಿ ಮೂಡಿಬಂದ ಈ ಚಲನಚಿತ್ರವು ರಂಗಭೂಮಿಯ ಕನಸು ಹೊತ್ತ ಕಲಾವಿದೆಯೊಬ್ಬಳ ಜೀವನಾಧಾರಿತವಾದದ್ದು. ಪುಟ್ಟಣ್ಣ ಕಣಗಾಲ್ ಕಲಾತ್ಮಕ ಶೈಲಿ, ಆರತಿಯವರ ಮನೋಜ್ಞ ಭಾವಾಭಿನಯ ರಂಗನಾಯಕಿ ಸಿನಿಮಾವು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಈ ಚಲನಚಿತ್ರದಿಂದಾಗಿ ಆರತಿಯವರು ಇಂದಿಗೂ ಕನ್ನಡ ಸಿನಿಮಾ ಪ್ರಪಂಚದಲ್ಲಿ  "ರಂಗನಾಯಕಿ"  ಎಂದೇ ಗುರುತಿಸಲ್ಪಡುತ್ತಾರೆ. ಅವರ ಸಿನಿಮಾ ಜೀವನದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ.
ಚಿತ್ರದಲ್ಲಿ ನಾಯಕಿಯ ಹೆಸರು ರಂಗನಾಯಕಿ (ರಂಗೂ), ನಾಯಕನ ಹೆಸರು ರಾಜ, ಒಬ್ಬ ಶ್ರೀಮಂತ ಮನೆತನದ ಯುವಕ. ಚಿತ್ರದ ಮತ್ತೊಂದು ಪ್ರಮುಖವಾದ ಪಾತ್ರ ಅಂಬರೀಶ್ ನಟನೆಯಲ್ಲಿ ಮೂಡಿಬಂದ ರಾಮಣ್ಣನ ಪಾತ್ರ. ಶ್ರೀ ಶಾರದ ನಾಟಕ ಮಂಡಲಿ ಎಂಬ ನಾಟಕ ಕಂಪನಿಯ ಮಾಲೀಕರು ಅನಾಥರಾದ ರಂಗನಾಯಕಿ ಮತ್ತು ರಾಮಣ್ಣರನ್ನು ಸಾಕಿ ಬೆಳೆಸಿ ತಮ್ಮ ಸ್ವಂತ ಮಕ್ಕಳಂತೇ ಪ್ರೀತಿಸುತ್ತಿರುತ್ತಾರೆ. ರಂಗನಾಯಕಿಗೆ ಬಾಲ್ಯದಿಂದಲೂ ನಟನೆಯಲ್ಲಿ ಅಪಾರವಾದ ಆಸಕ್ತಿ ಇರುತ್ತದೆ, ಆಕೆಯ ನಟನೆಯಿಂದಾಗಿ ನಾಟಕಗಳು ಎಲ್ಲಾ ಊರಿನಲ್ಲೂ ಅದ್ಭುತವಾಗಿ ಪ್ರದರ್ಶನಗೊಂಡು ಯಶಸ್ವಿಯಾಗುತ್ತಿರುತ್ತವೆ. ನಾಯಕ ರಾಜ ರಂಗನಾಯಕಿಯ ರೂಪ, ನಟನಾ ಶೈಲಿಗೆ ಆಕರ್ಷಿತನಾಗಿ ಆಕೆಯನ್ನು ಪ್ರೀತಿಸುತ್ತಾನೆ. ನಂತರ ಇಬ್ಬರೂ ಪರಸ್ಪರ ಆಕರ್ಷಿತರಾಗಿ ಪ್ರೀತಿಸಲು ಆರಂಭಿಸುತ್ತಾರೆ. ತಂದೆತಾಯಿಯರ ವಿರೋಧದ ನಡುವೆಯೇ ರಂಗನಾಯಕಿಯನ್ನು ವಿವಾಹವಾಗಿ ಒಂದು ಮಗುವನ್ನÀ್ತಪಡೆಯುತ್ತಾನೆ. ಆಕೆಯ ನಟನೆಯಿಂದಾಗಿಯೇ ಆಕರ್ಷಿತನಾಗಿ ಪ್ರೀತಿಸಿ ವಿವಾಹವಾದ ರಾಜ, ವಿವಾಹಾನಂತರ ತನ್ನ ಪತ್ನಿಯು ನಟಿಸುವುದು ತನ್ನ ಮನೆತನದ ಮರ್ಯಾದೆಗೆ ಅವಮಾನಕರ ಎಂದು ಪತ್ನಿಗೆ ನಟಿಸುವುದನ್ನು ನಿರ್ಬಂಧಿಸುತ್ತಾನೆ. ಸುಖಸಂಸಾರದಲ್ಲಿ ಸಕಲ ಸೌಕರ್ಯಗಳ ನಡುವೆ ಇದ್ದರೂ ರಂಗೂ ಮನಸ್ಸು ಅಭಿನಯದೆಡೆಗೆ ತುಡಿಯುತ್ತಿರುತ್ತದೆ. ಒಮ್ಮೆ ತನ್ನ ಸಾಕು ತಂದೆಯ ಕಂಪನಿ ಸಂಕಷ್ಟದಲ್ಲಿದ್ದಾಗ, ಅವರ ಸಹಾಯಾರ್ಥವಾಗಿ ರಂಗನಾಯಕಿ ನಾಟಕದಲ್ಲಿ ಅಭಿನಯಿಸುತ್ತಾಳೆ. ಇದರಿಂದ ಬೇಸರಗೊಂಡ ರಾಜ ತನ್ನ ಪತ್ನಿಯನ್ನು ತೊರೆದು ಮಗನೊಂದಿಗೆ ಪರವೂರಿಗೆ ಹೊರಟು ಹೋಗುತ್ತಾನೆ. ಇದರಿಂದಾಗಿ ರಂಗನಾಯಕಿ ಮಾನಸಿಕವಾಗಿ ತತ್ತರಗೊಳ್ಳುತ್ತಾಳೆ. ಅವಳ ಸಾಕುತಂದೆ ಹಾಗೂ ರಾಮಣ್ಣ ಅವಳೊಂದಿಗೆ ಇದ್ದು, ಪ್ರಸಿದ್ಧ ಕಲಾವಿದೆಯಾಗಿ ಬೆಳೆಯುವಂತೆ ಪ್ರೋತ್ಸಾಹಿಸುತ್ತಾರೆ. ನಂತರ ರಂಗನಾಯಕಿ "ಮಾಲ" ಎಂಬ ಹೆಸರಿನಿಂದ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿ ಪ್ರಸಿದ್ದ ನಾಯಕಿಯಾಗಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತಾಳೆ. ಸಮಾಜದಲ್ಲಿ, ನಟನಾ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದರೂ ಸಹ ತನ್ನ ಮಗನನ್ನು ನೆನೆದು ಸದಾ ಕೊರಗುತ್ತಿರುತ್ತಾಳೆ.
ರಂಗನಾಯಕಿಯ ನಟನೆಯಿಂದ ಆಕರ್ಷಿತನಾದ ಶ್ರೀಮಂತ ಯುವಕ "ಶೇಖರ್" ಅವಳಲ್ಲಿ ಅನುರಕ್ತನಾದ. ಆದರೆ ರಂಗನಾಯಕಿ ಅವನನ್ನು ತನ್ನ ಮಗನಂತೆ  ತಿಳಿದು ತಾಯಿಯಂತೆ ಸಲುಗೆಯಿಂದ ವರ್ತಿಸುತ್ತಿರುತ್ತಾಳೆ. ಇದನ್ನು ಕಂಡ ಪತ್ರಿಕೆಗಳು, ಜನರು ರಂಗನಾಯಕಿ ಹಾಗೂ ಶೇಖರ್ ನಡುವೆ ಅನೈತಿಕ ಸಂಬಂಧವಿದೆಯೆಂದು ಗಾಳಿಸುದ್ದಿ ಹಬ್ಬಿಸುತ್ತಾರೆ.
ಹಲವು ವರುಷಗಳ ನಂತರ ಪತಿ ರಾಜನನ್ನು ಭೇಟಿಯಾದ ರಂಗನಾಯಕಿ ತನ್ನ ಮಗನನ್ನು ಭೇಟಿಮಾಡಿಸುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಪತಿಯು ನಿರಾಕರಿಸುತ್ತಾನೆ. ನಂತರ ಮಗನನ್ನು ಭೇಟಿ ಮಾಡಲು ತಾಯಿಯು ಪರಿತಪಿಸುವುದನ್ನು ಕಂಡ ಪತಿ ರಾಜನು ರಂಗನಾಯಕಿಗೆ ಮಗನನ್ನು ಭೇಟಿಮಾಡಿಸಲು ಒಪ್ಪಿಕೊಳ್ಳುತ್ತಾನೆ. ಆದರೆ ಕೇವಲ ದೂರದಿಂದ ಮಾತ್ರ ನೋಡಬೇಕೆಂದು ನಿರ್ಬಂಧಿಸುತ್ತಾನೆ. ಅನಿವಾರ್ಯ  ಕಾರಣಗಳಿಂದಾಗಿ ಆಕೆಗೆ ತನ್ನ ಮಗನನ್ನು ನೋಡಲು ಸಾದ್ಯವಾಗುವುದಿಲ್ಲ. ಇದರಿಂದಾಗಿ ಆಕೆ ಸಂಪೂರ್ಣವಾಗಿ ಕುಗ್ಗಿಹೋಗುತ್ತಾಳೆ. ಪತ್ರಿಕೆಯಲ್ಲಿ ತನ್ನ ಮತ್ತು ಶೇಖರ್ ನ ಸಂಬಂಧದ ಬಗ್ಗೆ ಬರುತ್ತಿರುವ ವರದಿಗಳು, ತಾನು ಹೆತ್ತ ಮಗನನ್ನು ಹಲವು ವರುಷಗಳ ನಂತರ ಭೇಟಿಯಾಗಲು ಸಾಧ್ಯವಾಗದಂತಹ ಸ್ಥಿತಿ ಇವುಗಳೆಲ್ಲಾ ಅವಳ ಮನಸ್ಸನ್ನು ದುರ್ಬಲಗೊಳಿಸುತ್ತವೆ. ಇದರಿಂದಾಗಿ ಆಕೆ ನಿದ್ರೆಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗುತ್ತಾಳೆ.
ವಿಮಾನದಲ್ಲಿ ಶೇಖರನ ತಂದೆ ರಾಜ ಮಗನಿಗೆ ವಿವಾಹವಾಗಲು ತಿಳಿಸುತ್ತಾನೆ, ಆದರೆ ಶೇಖರ್ ತಾನು ನಟಿ ಮಾಲಾಳನ್ನು ಪ್ರೀತಿಸುತ್ತಿರುವುದಾಗಿ, ಆಕೆಯನ್ನೇ ವಿವಾಹವಾಗಲು ಬಯಸಿರುವುದಾಗಿ ತಿಳಿಸುತ್ತಾನೆ. ಮಗ ತನ್ನ ತಾಯಿಯನ್ನೇ ವಿವಾಹವಾಗಲು ಬಯಸಿರುವುದನ್ನು ಕಂಡ ತಂದೆ ಆಘಾತಗೊಂಡು, ಶೇಖರನಿಗೆ ಮಾಲಾಳೇ ಆತನ ಹೆತ್ತ ತಾಯಿ ಎಂದು ತಿಳಿಸುತ್ತಾನೆ. ವಿಷಯ ತಿಳಿದ ಶೇಖರ್ ತನ್ನ ತಾಯಿಗೇ ತಾನು ಪತಿಯಾಗಲು ಬಯಸಿದ್ದನ್ನು ನೆನೆದು ಪಶ್ಚಾತ್ತಾಪಗೊಂಡು ತನ್ನ ತಾಯಿಯ ಬಳಿ ಕ್ಷಮೆ ಕೇಳಿ, ಕೊನೆಯವರೆಗೂ ಆಕೆಯ ಸೇವೆಮಾಡಿ ತನ್ನ ಪಾಪ ಪರಿಹಾರಕ್ಕೆ ಪ್ರಯತ್ನಿಸುವೆ ಎಂದು ತಂದೆಗೆ ಹೇಳಿ, ತಾಯಿಯ ಬಳಿ ಕ್ಷಮೆ ಕೇಳಲು ಬರುತ್ತಾನೆ. ಆದರೆ ಅಷ್ಟರಲ್ಲಾಗಲೇ ರಂಗನಾಯಕಿ ಮರಣ ಹೊಂದಿರುತ್ತಾಳೆ.
     ಹೀಗೆ ನಟಿಯಾಗಿ ಬದುಕನ್ನು  ಆಯ್ದುಕೊಂಡ ಹೆಣ್ಣುಮಗಳು ತನ್ನ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದ್ದರೂ ಸಹ, ಸಮಾಜವು ಆಕೆಯನ್ನು ಸ್ವೀಕರಿಸುವ ರೀತಿ, ಸಮಾಜದಲ್ಲಿ ಹಾಗೇ ಉದ್ಯೋಗ ಕ್ಷೇತ್ರದಲ್ಲಿ ಆಕೆ ಎದುರಿಸುವ ಸಮಸ್ಯೆಗಳು, ವಿಕೃತ ಮನಸ್ಸಿನ ಪುರು  80ರ ದಶಕದಲ್ಲೇ ತೆರೆಕಂಡ ಸಿನಿಮಾವು ತನ್ನ ಕಥಾಹಂದರದಿಂದಾಗಿ ಇಂದಿಗೂ ಪ್ರಸ್ತುತ ಎನಿಸುತ್ತದೆ. ಈ ಚಿತ್ರವು ನಟನಾ ಕ್ಷೇತ್ರದಲ್ಲಿರುವ ಮಹಿಳೆಯರ ಸ್ಥಾನಮಾನಗಳು, ಅವರು ಎದುರಿಸುವ ಸಮಸ್ಯೆಗಳು, ಸಮಾಜ ಅವರನ್ನು ಸ್ವೀಕರಿಸುವ ರೀತಿ ಮೊದಲಾದವುಗಳ ಬಗ್ಗೆ ನಾವೆಲ್ಲರೂ ಯೋಚಿಸುವಂತೆ ಮಾಡುತ್ತದೆ. 
   – ಚಂದನ       

ಕಥಾವಲ್ಲರಿ - ಸ್ವಾಭಿಮಾನದ ಬದುಕು



ನಲ್ಲೂರು ಎಂಬ ಸಣ್ಣ ಗ್ರಾಮದಲ್ಲಿ ಬಡತನವನ್ನೇ ಹಾಸು ಹೊದ್ದುಕೊಂಡಿದ್ದ ಒಂದು ಬಡಬ್ರಾಹ್ಮಣ ಕುಟುಂಬ ವಾಸವಾಗಿತ್ತು.  ಗ್ರಾಮದ ಆಂಜನೇಯ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದು ಜೊತೆಗೆ ಪುರೋಹಿತಿಕೆಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡು ಮಗ ಇದ್ದರು.ದಂಪತಿಗಳು ತಮ್ಮ ಮಕ್ಕಳನ್ನು ಸಲಹುವ ಸಲುವಾಗಿ ಸಣ್ಣ ಪ್ರಮಾಣದಲ್ಲಿ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮಾಡಿ ಮಾರುವ ವ್ಯವಹಾರವನ್ನು ಪ್ರಾರಂಭಿಸಿ ,ತಮ್ಮಂತೇ ತಮ್ಮ ಮಕ್ಕಳು ಜೀವನದಲ್ಲಿ ಎಂದೂ ಕಷ್ಟಪಡಬಾರದೆಂದು ಶ್ರಮಿಸುತ್ತಿದ್ದರು.
            ಮುಂದೆ ಮೂರು ಮಕ್ಕಳು ಶಾಲೆಯಲ್ಲಿ ಆಟ ,ಪಾಠಗಳಲ್ಲಿ ಚುರುಕಾಗಿ  ಉತ್ತಮ ಅಂಕಗಳನ್ನು ಪಡೆದು ಪಿ.ಯು.ಸಿ. ಶಿಕ್ಷಣವನ್ನು ಪಡೆದರು. ಕಲಿಕೆಯಲ್ಲಿ ಜಾಣ್ಮೆ ಪ್ರತಿಭೆಯನ್ನು ಮೈಗೂಡಿಸಿಕೊಂಡು,ಕಾಲೇಜಿನ ಸ್ಕಾಲರ್ ಶಿಪ್ ನ ಸಹಾಯದಿಂದ ಅಕ್ಕ-ತಂಗಿಯರಿಬ್ಬರು ಬಿ.ಇ.ಪದವಿಯನ್ನು ಪಡೆದು, ಸಾಫ್ಟವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಜೊತೆಗೆ ಮನೆಯಲ್ಲಿನ ಸರ್ವ ಕಷ್ಟಗಳಿಗೂ ಬೆನ್ನೆಲುಬಾಗಿ ನಿಂತು ಒಡಹುಟ್ಟಿದ ತಮ್ಮನ ವಿದ್ಯಾಭ್ಯಾಸಕ್ಕೆ ಕೈಜೋಡಿಸಿದರು. ಮುಂದೆ ತಮ್ಮ ಒಬ್ಬ ಉತ್ತಮ ಐ.ಎ.ಎಸ್ ಅಧಿಕಾರಿಯಾಗಲು ಎಲ್ಲಾ ರೀತಿಯ ನೆರವು ನೀಡಿದರು.
             ಹೀಗೆ ಜೀವನ ಸಾಗುತ್ತಿದ್ದಾಗ ವಯಸ್ಸಾದ ತಂದೆ-ತಾಯಿಗಳು ಅನಾರೋಗ್ಯ ಪೀಡಿತರಾದಾಗ, ಮಕ್ಕಳು ತಂದೆತಾಯಿಗೆ ಉತ್ತಮ ಸೌಲಭ್ಯವುಳ್ಳ ಆಸ್ಪತ್ರೆಯಲ್ಲಿ  ಔಷಧೋಪಚಾರವನ್ನು ಕೊಡಿಸಿದರು. ಪಟ್ಟಣದಲ್ಲಿದ್ದ ಮಕ್ಕಳು ತಂದೆ-ತಾಯಿಯನ್ನು ತಮ್ಮೊಡನೆ ಇರುವಂತೆ ಕರೆದರೂ ಸಹ ಸ್ವಾಭಿಮಾನಿಯಾದ ದಂಪತಿಗಳು ತಮ್ಮ ಗ್ರಾಮವನ್ನು ಬಿಡದೆ ಅಲ್ಲಿಯೇ ನೆಲಸಿ, ತಮ್ಮ ಕೈಲಾದ ಕೆಲಸಗಳನ್ನು ಮಾಡಿಕೊಂಡು, ಯಾರ ಹಂಗಿಗೂ ಬೀಳದೆ ಜೀವನ ನಿರ್ವಹಿಸುತ್ತಿದ್ದರು. ಹೀಗೆ ಯಾರಿಗೂ ಕೇಡನ್ನು ಬಯಸದೆ, ಊರಿನ ಜನರ ಪ್ರೀತಿಗೆ ಪಾತ್ರರಾಗಿದ್ದು ಬದುಕನ್ನು ನಿರ್ವಹಿಸುತ್ತಿದ್ದರು. ***
   - ನಾಗಮಣಿ 

ಮುಕ್ತ ಸಾಹಿತ್ಯ ವೇದಿಕೆಯ ವಾರ್ಷಿಕ ವರದಿ - 1


ದಿನಾಂಕ 10-09-2015ರಂದು 9 ಸದಸ್ಯೆಯರೊಂದಿಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಆರಂಭಗೊಂಡ ಮುಕ್ತ ಸಾಹಿತ್ಯ ವೇದಿಕೆ ಸಾಹಿತ್ಯಾಸಕ್ತರಿಗೆ ಒಂದು ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ. ಅಂದು ಡಾ. ಜಿ. ಸುಧಾರವರ ಮುಂದಾಳತ್ವದಲ್ಲಿ ವೇದಿಕೆ ಆರಂಭವಾಯಿತು. 
ಆರಂಭದಲ್ಲಿ 15 ದಿನಗಳಿಗೊಮ್ಮೆ ಶ್ರೀಮತಿ ಪುಣ್ಯವತಿ ಪ್ರಕಾಶ್‍ರವರ ಮನೆಯಲ್ಲಿ ಸಂಜೆ 4 ಘಂಟೆಯಿಂದ 6 ಘಂಟೆಯವರೆಗೆ ಸಭೆ ಸೇರಲು ನಿರ್ಧರಿಸಲಾಯಿತು. ಸಭೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳಾದ ಭಾಷಾ ಆಟ, ಲೇಖಕಿಯರ ಪರಿಚಯ, ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ಮುಂತಾದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಯಿತು.
ಸದಸ್ಯೆಯರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಎಲ್ಲರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯುತ್ತಲೇ ಸಾಗಿತು. ಎಲ್ಲರ ಉತ್ಸುಕತೆ, ಆಸಕ್ತಿಯನ್ನು ಗಮನಿಸಿ ಸಭೆಯನ್ನು ಪ್ರತಿ ಗುರುವಾರ ಮಾಡಲು ತೀರ್ಮಾನಿಸಲಾಯಿತು.
ವೇದಿಕೆಯ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಲು ಪ್ರತಿ ೬ ತಿಂಗಳಿಗೆ ಒಂದು ಸಮಿತಿಯನ್ನು ರಚಿಸಬೇಕೆಂದು ತೀರ್ಮಾನಿಸಲಾಯಿತು. ಮೊದಲ ಸಮಿತಿಯಲ್ಲಿ ಕಾತ್ಯಾಯನಿ ಸಂಚಾಲಕರಾಗಿ, ಅರುಣ ಖಜಾಂಚಿಯಾಗಿ ಆಯ್ಕೆಯಾದರು. 
ನಂಜನಗೂಡು ತಿರುಮಲಾಂಬ, ಕೊಡಗಿನ ಗೌರಮ್ಮ, ತ್ರಿವೇಣಿ, ಅನುಪಮ ನಿರಂಜನ, ಜಯದೇವಿತಾಯಿ ಲಿಗಾಡೆ, ಮುಂತಾದ ಲೇಖಕಿಯರ ಪರಿಚಯ ಮಾಡಿಕೊಡಲಾಯಿತು. 
ಭಾಷಾ ಆಟಕ್ಕಾಗಿ ಇಬ್ಬಿಬ್ಬರು ಸದಸ್ಯೆಯರ ಗುಂಪನ್ನು ರಚಿಸಿ, ಆ ತಂಡಗಳಿಗೆ ಮಹಿಳಾ ಲೇಖಕಿಯರ ಹೆಸರನ್ನು ಇಡಲಾಯಿತು. ಭಾಷಾ ಆಟಗಳಲ್ಲಿ ಎಲ್ಲರಿಗೂ ಬಹುಮಾನ ಬರುವಂತಹ ಯೋಜನೆಯನ್ನು ರೂಪಿಸಲಾಯಿತು. ಪ್ರತಿ ವಾರ ಒಂದು ತಂಡ ಆಟವಾಡಿಸಿ, ಬಹುಮಾನ ವಿತರಿಸಿಕೊಂಡು ಬರುತ್ತಿದೆ.
ಪ್ರತಿವಾರ ಸಭೆ ಸೇರಿದಾಗ ನಡೆಸುವ ಪ್ರಸಕ್ತ ವಿದ್ಯಮಾನಗಳ ಕುರಿತಾದ, ಮಹಿಳೆಯರ ಕುರಿತಾದ ಚರ್ಚೆಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದಾರೆ. ಮೂಢನಂಬಿಕೆ, ಸ್ತ್ರೀಭ್ರೂಣಹತ್ಯೆ, ಬಾಲ್ಯವಿವಾಹ, ವರದಕ್ಷಿಣೆ, ಮರುಮದುವೆ, ಸ್ವಕರುಣೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಕೆಲವು ವಿಷಯಗಳನ್ನು ಚರ್ಚಿಸುವಾಗ ಸಂತೋಷ, ದುಃಖ, ತಲ್ಲಣ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಂಡು, ನಮ್ಮ ವೇದಿಕೆಗಿರುವ “ಮುಕ್ತ” ಎಂಬ ಪದವನ್ನು ಸಾರ್ಥಕಗೊಳಿಸಿದ್ದಾರೆ. 
ದಿನಾಂಕ 16-01-2015ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕನ್ನಡದ, ಕನ್ನಡಿಗರ ಸ್ಥಿತಿಗತಿ, ಕನ್ನಡ ನಾಡುನುಡಿ ಇತ್ಯಾದಿಗಳ ಬಗ್ಗೆ ಸದಸ್ಯೆಯರು ತಿಳಿಸಿಕೊಟ್ಟರು. ಅಂತ್ಯಾಕ್ಷರಿ, ಕನ್ನಡದ ಬಗೆಗಿನ ಗೀತಗಾಯನ ಸಹ ಇತ್ತು.
ದಿನಾಂಕ 21-01-2016ರಂದು ಚುಟಕ ಬರೆಯುವುದು ಹೇಗೆ ಎಂಬುದರ ಬಗ್ಗೆ ಡಾ. ಜಿ ಸುಧಾರವರು ಕಾರ್ಯಾಗಾರ ನಡೆಸಿಕೊಟ್ಟರು. ಕೆಲವು ಪದಗಳನ್ನು ಕೊಟ್ಟು ಅಲ್ಲಿಯೇ ಚುಟಕ ರಚಿಸಲು ಹೇಳಿದರು. ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ, ರಚಿಸಿ, ವಾಚಿಸಿದರು. ಈಗ ಅದನ್ನೇ ಹವ್ಯಾಸವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. 
ದಿನಾಂಕ 12 – 03 – 2016 ರಂದು “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಆರಂಭಕ್ಕೆ ಕಾರಣರಾದವರ ಬಗ್ಗೆ, ಮಹಿಳಾ ಚಳುವಳಿ ಬೆಳೆದು ಬಂದ ಬಗ್ಗೆ ವಿವರಿಸಲಾಯಿತು. ನಂತರ ರಸಪ್ರಶ್ನೆ ಕಾರ್ಯಕ್ರಮ, ನೃತ್ಯ, ಸ್ವರಚಿತ ಕವನ ವಾಚನ, ನಡೆದವು. ಅಂದು ಸದಸ್ಯೆಯರೇ ಅಡುಗೆ ಮಾಡಿಕೊಂಡು ಬಂದು ಎಲ್ಲರೂ ಒಟ್ಟಾಗಿ ಆಹಾರ ಸೇವಿಸಿದರು. 
ಆಂದು ಆರಂಭವಾದ ಕೈಯಡುಗೆಯ ರುಚಿ, ವೇದಿಕೆ ಆಚರಿಸುವ ಎಲ್ಲಾ ಸಮಾರಂಭದಲ್ಲೂ ತನ್ನ ಸ್ವಾದವನ್ನು ಉಳಿಸಿಕೊಂಡು ಬರುತ್ತಿದೆ. 
ದಿನಾಂಕ 14-04-2016ರಂದು “ಕೊಡಗಿನ ಗೌರಮ್ಮನವರ ಜನ್ಮದಿನ”ವನ್ನು ಆಚರಿಸಲಾಯಿತು. ಅವರ ಜೀವನ ಮತ್ತು ಸಾಧನೆ ಬಗ್ಗೆ ತಿಳಿಸಿಕೊಡಲಾಯಿತು. ಅವರ ಜೀವನದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಇತ್ತು. ನಂತರ ಸದಸ್ಯೆಯರು ಸ್ವರಚಿತ ಕವನ ಓದಿದರು. ಅಂದು ಡಾ. ಜಿ ಸುಧಾರವರು “ಕಥಾ ಕಾರ್ಯಾಗಾರ” ನಡೆಸಿಕೊಟ್ಟರು. ಅವರು ನೀಡಿದ ಅಪೂರ್ಣ ಕಥೆಯೊಂದನ್ನು ಎಲ್ಲ ಸದಸ್ಯೆಯರು ವಿಭಿನ್ನವಾಗಿ ಪೂರ್ಣಗೊಳಿಸಿ ಓದಿದರು. ನಂತರದ ದಿನಗಳಲ್ಲಿ ಸದಸ್ಯೆಯರು ಕವನ, ಕಥೆ ಬರೆಯುವುದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ. 
ದಿನಾಂಕ 7-07-2016 ರಂದು “ತ್ರಿವೇಣಿಯವರ ಸಂಸ್ಮರಣ ದಿನ” ಆಚರಿಸಲಾಯಿತು. ಎಲ್ಲ ಸದಸ್ಯೆಯರು ತ್ರಿವೇಣಿಯವರ ಒಂದೊಂದು ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಆ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವಿತ್ತು. 
ದಿನಾಂಕ 14-07-2016ರಂದು ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪಿ ಅನುಪಮಾರವರು ಅಧ್ಯಕ್ಷರಾಗಿ, ಚಂದನರವರು ಕಾರ್ಯದರ್ಶಿಯಾಗಿ, ಅಂಬಿಕರವರು ಖಜಾಂಚಿಯಾಗಿ ಆಯ್ಕೆಯಾದರು. ಭಾಷಾ ಆಟಗಳಿಗೆ ಹೊಸ ತಂಡಗಳ ರಚನೆ ಮಾಡಲಾಯಿತು.
ದಿನಾಂಕ 21-07-2016ರಂದು ಹಳೆಯ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಮತ್ತು ಹೊಸ ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಯಿತು. ಪಿ ಅನುಪಮಾರವರು ಅಧ್ಯಕ್ಷರಾಗಿ, ಚಂದನರವರು ಕಾರ್ಯದರ್ಶಿಯಾಗಿ, ಅಂಬಿಕರವರು ಖಜಾಂಚಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಅಂದು, ಹಿಂದಿನ ಒಂದು ವರ್ಷದಲ್ಲಿ ಅತಿ ಹೆಚ್ಚು ಹಾಜರಾತಿ ಪಡೆದಿದ್ದ ಎಂ ಎಸ್ ವಿಜಯಲಕ್ಷ್ಮಿಯವರಿಗೆ ವಿಶೇಷ ಬಹುಮಾನ ನೀಡಲಾಯಿತು. 
ದಿನಾಂಕ 28-07-2016ರಂದು ವೇದಿಕೆಯಿಂದ ತ್ರೈಮಾಸಿಕ ಪತ್ರಿಕೆಯೊಂದನ್ನು ಹೊರತರುವ ಬಗ್ಗೆ ಚರ್ಚಿಸಲಾಯಿತು ಮತ್ತು ಅದಕ್ಕೆ “ಪ್ರಮತಿ” ಎಂದರೆ ವಿವೇಕ ಎಂದು ನಾಮಕರಣ ಮಾಡಲು ನಿರ್ಧರಿಸಲಾಯಿತು. ಎಲ್ಲಾ ಸದಸ್ಯೆಯರು ಉತ್ಸುಕರಾಗಿ ಕಥೆ, ಕವನ, ಲೇಖನ, ಭಾಷಾ ಆಟಗಳನ್ನು ಪತ್ರಿಕೆಗೆ ಕೊಡಲು ಮುಂದಾದರು. 
ದಿನಾಂಕ 04-08-2016ರಂದು ತಲಕಾಡು, ಗಗನಚುಕ್ಕಿ, ಭರಚುಕ್ಕಿಗೆ ಒಂದು ದಿನದ ಪ್ರವಾಸ ಹಮ್ಮಿಕೊಳ್ಳಲಾಯಿತು. ತಲಕಾಡಿನಲ್ಲಿ ಸಭೆಯನ್ನು ಮುಗಿಸಿದ ನಂತರ ಎಲ್ಲಾ ಸದಸ್ಯೆಯರು ಚಿಕ್ಕ ಮಕ್ಕಳಂತೆ ನೀರಿನಲ್ಲಿ ಆಟವಾಡಿ ಆನಂದಿಸಿದರು.
ದಿನಾಂಕ 10-08-2016ರಂದು “ವಿಶ್ವ ಸ್ನೇಹ ದಿನ” ಮತ್ತು “ವಿಶ್ವ ತಂದೆಯರ ದಿನ”ವನ್ನು ಆಚರಿಸಲಾಯಿತು. ಅಂದು ಎಲ್ಲರು ತಮ್ಮ ಆತ್ಮೀಯ ಸ್ನೇಹಿತರ ಬಗ್ಗೆ, ತಂದೆಯ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಅಂದು ಸ್ನೇಹ ಮತ್ತು ತಂದೆಯ ಬಗ್ಗೆ ಇರುವ ಸಿನಿಮಾ ಹಾಡುಗಳನ್ನು ಬರೆಯುವ, ಹಾಡುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. 
ದಿನಾಂಕ 25-08-2016ರಂದು ವೇದಿಕೆಯಲ್ಲಿ “ಸ್ವಾತಂತ್ರ್ಯ ದಿನ”ವನ್ನು ಆಚರಿಸಲಾಯಿತು. ದೇಶಪ್ರೇಮಿ ಗೀತೆಗಳನ್ನು ಹಾಡಲಾಯಿತು. ಸದಸ್ಯೆಯರೆಲ್ಲ ಸ್ವಾತಂತ್ರ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ದಿನಾಂಕ 22-09-2016ರಂದು ವೇದಿಕೆಯ “ವಾರ್ಷಿಕೋತ್ಸವ”ವನ್ನು ಸಂಘಟಿಸಲಾಯಿತು. ವಿವಿಧ ಆಟಗಳು, ಚರ್ಚೆಗಳು ನಡೆದವು. ಎಲ್ಲ ಸದಸ್ಯೆಯರು ಒಂದು ವರ್ಷದಲ್ಲಿ ಸಾಹಿತ್ಯ ವೇದಿಕೆಯಲ್ಲಿ ತಮಗಾದ ಅನುಭವಗಳನ್ನು, ತಮ್ಮಲ್ಲಾದ ಬದಲಾವಣೆಗಳನ್ನು ಖುಷಿಯಿಂದ ಮುಕ್ತವಾಗಿ ಹಂಚಿಕೊಂಡರು.
ದಿನಾಂಕ 6-10-2016ರಂದು “ವಿಶ್ವ ಹಿರಿಯ ನಾಗರಿಕರ ದಿನ”ವನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ಎಲ್ಲ ಸದಸ್ಯೆಯರು ಹಿರಿಯರ ಬಗೆಗಿನ ನಮ್ಮ ಕರ್ತವ್ಯಗಳ ಬಗ್ಗೆ ಚರ್ಚಿಸಿದರು, ತಮ್ಮ ಭಾವನೆ, ಅನುಭವಗಳನ್ನು ಹಂಚಿಕೊಂಡರು. 
ಹೀಗೆ ನಮ್ಮ “ಮುಕ್ತ ಸಾಹಿತ್ಯ ವೇದಿಕೆ”ಯು ಈ ಒಂದು ವರ್ಷದಲ್ಲಿ ಹತ್ತುಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಎಲ್ಲ ಸದಸ್ಯೆಯರಲ್ಲೂ ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತಾ ಬಂದಿದೆ, ಅವರನ್ನು ಲೇಖಕಿಯರನ್ನಾಗಿ, ಕತೆಗಾರ್ತಿಯರನ್ನಾಗಿ, ಕವಯತ್ರಿಯರನ್ನಾಗಿ, ಭಾಷಣಕಾರರನ್ನಾಗಿ ರೂಪಿಸುತ್ತಾ ಬಂದಿದೆ. 

Sunday, 26 February 2017

ಲೇಖನ - ನಮ್ಮೂರು

 
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೋಕಿನಲ್ಲಿರುವ ಪುಟ್ಟ ಗ್ರಾಮ ನಮ್ಮ ಮುಡಿಗುಂಡ. ಈ ಗ್ರಾಮವು ಚೋಳರ ಕಾಲದಲ್ಲಿ ನಿರ್ಮಿತವಾಗಿದೆ. ಊರ ಮಧ್ಯೆ ಇರುವ ಮಾರಮ್ಮನ ದೇವಸ್ಥಾನದಲ್ಲಿರುವ ಶಾಸನದಿಂದ ಚೋಳರ ಕಾಲದ್ದು  ತಿಳಿದು ಬಂದಿದೆ. ವಿಶೇಷವೆಂದರೆ ಈ ಊರಿನ ನಾಲ್ಕು ದಿಕ್ಕುಗಳಲ್ಲು ದೇವಸ್ಥಾನವಿದೆ. ಪೂರ್ವ ದಲ್ಲಿ -ಶ್ರೀ ವರಸಿದ್ದಿವಿನಾಯಕ ದೇವಸ್ಥಾನ, ಪಶ್ಚಿಮದಲ್ಲಿ-ನಾರಯಣಸ್ವಾಮಿ ದೇವಸ್ಥಾನ, ಉತ್ತರದಲ್ಲಿ - ಮುಳ್ಳಾಚಮ್ಮ ದೇವಸ್ಥಾನ, ದಕ್ಷಿಣದಲ್ಲಿ - ಬಸವೇಶ್ವರ ದೇವಸ್ಥಾನ. ಜೊತೆಗೆ ಊರ ಒಳಗೆ ಮುಡಿಗುಂಡೇಶ್ವರ, ಆಂಜನೇಯಸ್ವಾಮಿ, ಗಂಗಾಳಮ್ಮ ದೇವಸ್ಥಾನಗಳಿವೆ.

ಈ ಊರಿಗೆ ಮುಡಿಗುಂಡ ಎಂಬ ಹೆಸರು ಬರುವುದರ ಹಿಂದೆ ಒಂದು  ಕಥೆ ಇದೆ.ಚೋಳ ಮಹಾರಾಜರು ಪರಿವಾರ ಸಮೇತರಾಗಿ ತೀರ್ಥ ಯಾತ್ರೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ರಾತ್ರಿ ಸಮಯದಲ್ಲಿ ರಾಜರ ಮಗುವಿಗೆ ತೀವ್ರ ಅಸ್ವಸ್ಥತಯಾಯಿತು. ಆ ರಾತ್ರಿ ಕನಸಿನಲ್ಲಿ ರಾಜರಿಗೆ ಶಿವನ ದರ್ಶನವಾಗುತ್ತದೆ, ನಂತರ ಮಹಾರಾಜರು ಹತ್ತಿರದಲ್ಲಿದ್ದ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಹಾಗು ದರ್ಶನ ಮಾಡುವಾಗ ಮಗುವಿಗೆ ತಲೆಯ ಮುಡಿ ಕೊಡುವಂತೆ ಪ್ರೇರಣೆಯಾಗುತ್ತದೆ.
ಅದರಂತೆ ಮಗುವಿಗೆ ಮುಡಿಯನ್ನು ಕೊಡಿಸುತ್ತಾರೆ. ಅದರಿಂದ ಮಗುವಿನ ಕಾಯಿಲೆ ಗುಣಮುಖವಾಗುತ್ತದೆ. ರಾಜರು ಮಗುವಿಗೆ ಮುಡಿಯನ್ನು ಕೊಡಿಸಿದ್ದಕ್ಕೆ ಊರಿಗೆ ಮುಡಿಕೊಂಡ ಎಂದು ಹೆಸರಾಯಿತು ಅದೇ ಕ್ರಮೇಣ ಮುಡಿಗುಂಡ ಎಂದಾಯಿತು. 
ನಮ್ಮೂರಿನಲ್ಲಿ ಮಾರಿಹಬ್ಬವನ್ನು ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದರು ಕಾಲ ಕ್ರಮೇಣ ಅದು ನಿಂತು ಈಗ ನಾರಯಣಸ್ವಾಮಿ ದೇವಾಲಯದಲ್ಲಿ ವರ್ಷಕೊಮ್ಮೆ ಕಾರ್ತೀಕ ಮಾಸದ ಪೂಜೆಯನ್ನು ಊರಿನ ಯವಕರ ತಂಡ  ವಿಶೇಷವಾಗಿ ಆಚರಿಸುತ್ತಾ ಬಂದಿದ್ದಾರೆ.
ರೇಷ್ಮೆ ನಾಡು ಎಂದೇ ಹೆಸರಾದ ಕೊಳ್ಳೇಗಾಲದ ಹತ್ತಿರವಿರುವ ಈ ಗ್ರಾಮದಲ್ಲಿ ರೇಷ್ಮೆ ಕಾರ್ಖಾನೆ ಇದೆ. ಇಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ  ಬಟ್ಟೆ ಹಾಗೂ ಸೀರೆಗಳು ದೊರೆಯುತ್ತದೆ. ರೇಷ್ಮೆಗೂಡಿನ ಮಾರುಕಟ್ಟೆಗೆ ಈ ಗ್ರಾಮ ಪ್ರಸಿದ್ಧಿಯಾಗಿದೆ. ಪ್ರತಿನಿತ್ಯ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ.
ಈ ಊರಿನಲ್ಲಿ ಜ್ಞಾನಕ್ಕೆ ದೇಗುಲವಾದ ಶಾಲೆಗಳು ಇದೆ. ೧ರಿಂದ ೭ನೇ ತರಗತಿಯವರಗೆ ಸರಕಾರಿ ಶಾಲೆಯಿದ್ದು, ೮ರಿಂದ ೧೦ರವರಗೆ ಜೆ.ಎಸ್.ಎಸ್.ಶಾಲೆಯಲ್ಲಿ ವಿಧ್ಯಾರ್ಥಿ-ವಿದ್ಯಾರ್ಥಿನಿಯರು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ  ಅನೇಕ ವಿದ್ಯಾವಂತರು ಇಂದು ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ.
ಇಂತಹ ಗ್ರಾಮವನ್ನು ನಮ್ಮೂರು ಎಂದು ಹೇಳಿಕೊಳ್ಳಲು ನನಗೆ ಸಂತೋಷವೆನಿಸುತ್ತದೆ.
-- ಜಯದೇವಿ.ಬಿ       

ಕವನ - ಜೀವನದ ಬೆಸುಗೆ


ಸಂಬಂಧಗಳ ಬೆಸುಗೆಯಲಿ
ಬಿರುಕು ಬಾರದಿರಲಿ,
ತಪ್ಪುಗಳಿಗೆ ಕ್ಷಮೆ ಇರಲಿ,
ಬದುಕು ನಗುತ  ಸಾಗಲಿ.
ಭಿನ್ನಾಭಿಪ್ರಾಯಗಳು ಬಂದಲ್ಲಿ
ನೆಮ್ಮದಿಯಿರುವುದೆ ಮನದಲ್ಲಿ
ಪ್ರೀತಿ ಗೌರವ ಬೆಳೆಯಲಿ
ಇಬ್ಬರ ಮನಸ್ಸುಗಳಲಿ
ಮುನಿಸು ಕೋಪ ಕ್ಷಣಿಕವಿರಲಿ
ಗೊಡವೆ ಗೊಂದಲ ತೊಲಗಲಿ,
ಸುಖ ಶಾಂತಿ ಅರಳಲಿ,
ಬಾಳು ಸಾರ್ಥಕತೆಯೆಡೆಗೆ ಸಾಗಲಿ.
            - ಮಹೇಶ್ವರಿ.ಎಸ್.ಎಸ್ 

ಚುಟುಕು

ಹೆಣ್ಣು ಮನೆಯ ಕಣ್ಣು
ಹೆಣ್ಣು ಒಲುಮೆಯ ಹಣ್ಣು
ಹೆಣ್ಣು ಮಮತೆಯ ರೂಪ
ಹೆಣ್ಣು ಒಲುಮೆಯ ದೀಪ

ಸಂಗೀತವೇ ಸತ್ಯ
ಸಂಗೀತವೇ ನಿತ್ಯ
ಸಂಗೀತ ಬೆಳೆಸಿ
ಸಂಗೀತ ಅರಳಿಸಿ
ಸಂಸ್ಕೃತಿಯ ಉಳಿಸಿ

ಗಿಡ ಮರಗಳಿಗೆ ಬೇಕು ಮಣ್ಣು
ಅದರಿಂದ ಸಿಗುವುದು ಹಣ್ಣು
ಸೇವಿಸಿದರೆ ಪ್ರತಿದಿನವೂ ಅದನ್ನು
ಆಗುವುದು ಎಲ್ಲರ ಜೀವನ ಹೊನ್ನು
ಯುಗಾದಿ ಬರುವುದು ಪ್ರತೀ ವರುಷ
ತರುವುದು ಎಲ್ಲರಿಗೂ ಹರುಷ
ಹೊಸವರುಷ ಸವಿದರೆ ಬೇವು ಬೆಲ್ಲ
ಸಿಗುವುದು ಆನಂದ ಬಾಳೆಲ್ಲ
ಮರೆಯೆಯಲಾರೆ ನನ್ನ ಬಾಲ್ಯದ ಆಟ
ಅದರಿಂದ ಕಲಿತೆ ಹಲವಾರು ಪಾಠ
ಸಹನೆಗೆ ಹೆಸರಾಗಿ
ಪ್ರೀತಿಗೆ ಬೆಳಕಾಗಿ
ಮಕ್ಕಳಿಗೆ ತಾಯಿಯಾಗಿ
ಪ್ರಜ್ವಲಿಸುವವಳೆ ತಾಯಿ

ಗೆದ್ದೇ ಗೆಲುವೆವು ಒಂದು ದಿನ
ಗೆಲ್ಲಲೇ ಬೇಕು ಒಳ್ಳೆಯತನ
ಸೋಲು ಗೆಲುವಿಗೆ ಪೂರಕ
ಪಡದಿರು ನೀ ಎಂದಿಗೂ ಆತಂಕ


   - ಶ್ವೇತ