Pages

Tuesday, 31 October 2017

ಲಘು ಬರಹ - 1


ಅಡುಗೆ ಮನೆಯಲ್ಲಿ ಮನೆಯಾಕೆ ಮಧ್ಯಾಹ್ನದ ಅಡುಗೆ ಸಿದ್ಧಪಡಿಸಲು ಬಂದಳು. ಅನ್ನ ಮತ್ತು ರಸಂ ಮಾಡಿದರೆ ಸಾಕು ಎಂದುಕೊಂಡಳು. ಕುಕ್ಕರ್ ನಲ್ಲಿ ಅನ್ನಕ್ಕಿಟ್ಟು, ರಸಂ ಮಾಡಲು ರಸಂ ಪುಡಿಯ ಡಬ್ಬ ತೆಗೆದಾಗ ಅದು ಖಾಲಿಯಾಗಿತ್ತು. ಪುಡಿ ಮಾಡಲು ಬೇಕಾದ ಒಣಮೆಣಸಿನಕಾಯಿ, ಮೆಣಸು, ಜೀರಿಗೆ ಅರಿಶಿಣ ಮತ್ತು ಧನಿಯ ಎಲ್ಲವನ್ನು ಮೇಜಿನ ಮೇಲಿಟ್ಟಳು.
   ಕಾಲಿಂಗ್ ಬೆಲ್ ಸದ್ದಾಗಲು ಬಾಗಿಲನ್ನು ತೆಗೆಯಲು ಹೋದಳು. ಆಕೆಯ ಗೆಳತಿ ಬಂದಿದ್ದಳು. ಅವರಿಬ್ಬರು ಹಾಗೆಯೇ ಮಾತಿಗೆ ಕುಳಿತರು. ಈ ಕಡೆ ಅಡಿಗೆಮನೆಯಲ್ಲಿ ಮೇಜಿನ ಮೇಲಿದ್ದ ಸಾಮಗ್ರಿಗಳು ಮಾತನಾಡಲು ಪ್ರಾರಂಭಿಸಿ ನಾ ಹೆಚ್ಚು ನಾ ಹೆಚ್ಚು ಎಂದು ಹೇಳತೊಡಗಿದವು.
  ಮೊದಲು ಅರಿಶಿಣವು ಹೇಳಿತು,  ಕೆಮ್ಮು, ನೆಗಡಿ, ಗಂಟಲು ನೋವು ಬಂದಾಗ ನನ್ನನ್ನು ಬಿಸಿಹಾಲಿಗೆ ಹಾಕಿ ಜೇನುತುಪ್ಪ ಸೇರಿಸಿ ಕುಡಿದರೆ ಹಿತವೆನಿಸುತ್ತದೆ. ಅಲ್ಲದೆ ನನ್ನನ್ನು ಸಾಂಬಾರಿಗೆ ಪದಾರ್ಥ ವಾಗಿಯು ಬಳಸುತ್ತಾರೆ ಹಾಗು ಪೂಜೆ ಮತ್ತು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ ಎಂದು.
  ನಂತರ ಮೆಣಸು ಹೇಳಿತು ನಾನು ಗುಂಡಾಗಿ, ಕಪ್ಪಾಗಿರುವೆ ನನ್ನನ್ನು ಸಹ ಸಾಂಬಾರಿಗೆ ಪದಾರ್ಥವಾಗಿ ಬಳಸುತ್ತಾರೆ. ಕೆಮ್ಮು ಮತ್ತು ಕಫದ ನಿವಾರಣೆಗೆ ಜೇನುತುಪ್ಪದೊಂದಿಗೆ ಪುಡಿ ಮಾಡಿ ಸೇವಿಸುವರು. ಹಾಗು ನನ್ನನ್ನು ಅರೆದು ಮೊಡವೆಗೆ ಹಚ್ಚಿದರೆ ಬೇಗನೆ ಮೊಡವೆ ಒಣಗಿ ಹೋಗುವುದು.
  ಜೀರಿಗೆ ನಾನು ಸಣ್ಣಗೆ ಉದ್ದವಾಗಿರುವೆ ನನ್ನನ್ನು ಸಹ ಸಾಂಬಾರಿಗೆ ಪದಾರ್ಥವನ್ನಾಗಿ ಉಪಯೋಗಿಸುತ್ತಾರೆ. ನನ್ನನ್ನು ಕಷಾಯವನ್ನಾಗಿ ಮಾಡಿ ಕುಡಿದರೆ ಅಸಿಡಿಟಿ ನಿವಾರಣೆಯಾಗುತ್ತದೆ. ಮತ್ತು ದೇಹಕ್ಕೆ ತಂಪನ್ನು ನೀಡುತ್ತೇನೆ ಎಂದಿತು.
  ಧನಿಯಾ  ಹೇಳಿತು ನನ್ನನ್ನು ಸಹ ಸಾಂಬಾರಿಗೆ ಪದಾರ್ಥವನ್ನಾಗಿ ಉಪಯೋಗಿಸುವರು. ನನ್ನ ಕಷಾಯವನ್ನು ಕುಡಿದರೆ ಪಿತ್ತವು ಶಮನವಾಗುತ್ತದೆ.
  ಇಲ್ಲಿಯವರೆಗೆ ಸುಮ್ಮನ್ನಿದ್ದ ಒಣಮೆಣಸಿನಕಾಯಿ, ನಾನು ನಿಮಗೆಲ್ಲರಿಗೂ ದೊಡ್ಡವನು ನಾನಿಲ್ಲದೆ ಖಾರವಿಲ್ಲ. ಊಟಕ್ಕಾಗಲಿ, ತಿಂಡಿಗಾಗಲಿ ನಾನು ಬೇಕೇ ಬೇಕು ಎಂದಿತು.
  ಚರ್ಚೆ ಹೀಗೆ ಸಾಗುತ್ತಲೇಯಿತ್ತು. ಸ್ವಲ್ಪ ಸಮಯದ ನಂತರ ಎಲ್ಲರು ಸೇರಿ ಒಂದು ನಿರ್ಧಾರಕ್ಕೆ ಬಂದರು. ನಮ್ಮಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಲ್ಲರೂ ಕೈಯಲ್ಲಿರುವ ಬೆರಳಿನಂತೆ.ಒಂದೇ ಪದಾರ್ಥದಿಂದ ಸಾಂಬಾರು  ಮಾಡಲಾಗುವುದಿಲ್ಲ. ಎಲ್ಲವನ್ನು ಸರಿಯಾದ ಪ್ರಮಾಣದಲ್ಲಿ ಹಾಕಿ ಹುರಿದು ಪುಡಿ ಮಾಡಿ, ಉಪಯೋಗಿಸಿದಾಗ ಮಾತ್ರ ಸಾಂಬಾರು ರುಚಿಯಾಗುತ್ತದೆ ಎನ್ನುವ ನಿರ್ಧಾರವನ್ನು ತೆಗೆದುಕೊಂಡವು.
  ಅಷ್ಟರಲ್ಲಿ  ಮನೆಯಾಕೆ ಬಂದಳು ತುಂಬಾ ತಡವಾಯಿತೆಂದು ಬೇಗ ಬೇಗ ಎಲ್ಲ ಪದಾರ್ಥಗಳನ್ನು ಹಾಕಿ ಹುರಿದು ಪುಡಿ ಮಾಡಿ ರಸಂ ಮಾಡಿದಳು.
  ಹೀಗೆ ಅಡುಗೆಯಲ್ಲಿ ಉಪ್ಪು, ಹುಳಿ, ಕಾರ ಹಾಗು  ಸಿಹಿ ಎಲ್ಲ ಸರಿಯಾದ ಪ್ರಮಾಣದಲ್ಲಿದ್ದಲ್ಲಿ ಊಟದ ರುಚಿ ಸರಿಯಾಗಿರುತ್ತದೆ. ಹಾಗೆಯೇ  ಜೀವನದಲ್ಲೂ ಸಹ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಚಿತ್ತದಿಂದ ಎದುರಿಸಿದರೆ ಬದುಕು ಸುಂದರವೆನಿಸುತ್ತದೆ.
- ಮಧುಮತಿ ಎಂ ಎಸ್

No comments:

Post a Comment