Pages

Tuesday, 31 October 2017

ಪುಟ್ಕಥೆಗಳು -



ಅವರಿಬ್ಬರ ನಡುವೆ - ಹೆಪ್ಪುಗಟ್ಟಿದ ನೋವೆಲ್ಲ ಕರಗಿಹೋಯಿತು ಒಂದು ಹನಿ ಕಣ್ಣೀರಿನಲಿ, ವರುಷಗಟ್ಟಲೆ ಬೆಳೆದಿದ್ದ ಮೌನ ಮುರಿಯಿತು "ಕ್ಷಮಿಸು" ಎಂಬ ಒಂದೇ ಮಾತಿನಲಿ, ಬೆಳೆದಿದ್ದ ಕಂದಕ ಮುಚ್ಚಿಹೋಯಿತು ಒಂದು ಆತ್ಮೀಯ ಅಪ್ಪುಗೆಯಲ್ಲಿ!!  
*****
ಅವನನ್ನು ಅಣ್ಣನೆಂದು ನಂಬಿದ್ದಳು ಆಕೆ. ಅವನೇ ಅವಳ ಪಾಲಿಗೆ ಮುಳ್ಳಾಗುತ್ತಾನೆಂದು ಅವಳಿಗೇನು ಗೊತ್ತಿತ್ತು??!!   
 ****
ರಸ್ತೆಯಲ್ಲಿ ಎರಡು ದೃಶ್ಯಗಳು. ವ್ಯಕ್ತಿ ಅಪಘಾತಕ್ಕೆ ಒಳಗಾಗಿ ನೆರವು ಪಡೆಯಲು ವಿಫಲ ಯತ್ನ ನಡೆಸಿದ್ದಾನೆ. ಇನ್ನೊಂದೆಡೆ ವಿದ್ಯುತ್ ಗೆ ಸಿಲುಕಿ ಕೆಳಗೆ ಒದ್ದಾಡುತ್ತಾ ಇರುವ ಕಾಗೆಯ ಸುತ್ತ ಅದರ ದೊಡ್ಡ ಬಳಗವೇ ನೆರೆದಿದೆ !!
****
"ಅರೆನಿಮಿಷ ಪೊರಕೆ ಹಿಡಿದು ಫೋಟೊ ಪೇಪರ್ ನಲ್ಲಿ ಹಾಕಿಸಿಕೊಳ್ಳುವರಿಂದ ಭಾರತ ಸ್ವಚ್ಛವಾಗುವುದಿಲ್ಲ; ದಿನವೂ ಟನ್ ಗಟ್ಟಲೆ ಕಸ ತೆಗೆವ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ಕೊಡ್ರಪ್ಪ" ಕೂಗಿ ಕೂಗಿ ಹೇಳುತ್ತಿದ್ದರು ಗಾಂಧೀಜಿ. ಸ್ವಚ್ಛ ಭಾರತ ಅಭಿಯಾನದ ಅಬ್ಬರದ ಪ್ರಚಾರದಲ್ಲಿ ಅವರ ದನಿ ಅಧಿಕಾರಿಗಳಿಗೆ  ಕೇಳಿಸಲೇ ಇಲ್ಲ!!
****
ಪ್ರಯಾಣದುದ್ದಕ್ಕೂ ಜಾತಿ, ಅಂತಸ್ತಿನ ಬಗ್ಗೆ ಮಾತನಾಡುತ್ತಿದ್ದ ಆ ಯುವಕ. ರೈಲು ಕೆಟ್ಟು ನಿಂತಿತು, ಬೆಂಗಾಡಿನಲ್ಲಿ, ರಣಬಿಸಿಲಿನಲ್ಲಿ. ದಾಹದಿಂದ ಜೀವ ತಲ್ಲಣಿಸುತ್ತಿದ್ದಾಗ ಗುಡಿಸುವ ಹುಡುಗ ತನ್ನ ನೀರಿನ ಬಾಟಲಿ ಹಿಡಿದ!!
****
"ಅಲ್ಲಮ್ಮ. ಅಂದು ಅವಳಿಗಾಗಿ ನಿನ್ನ ಬಿಟ್ಟು ಹೋದಾಗ ಅತ್ತೆ. ಈಗ ನಾನವಳನ್ನು ಬಿಟ್ಟು ಬಂದಿದ್ದೇನೆ ಎಂದರೆ ಏಕೆ ನೊಂದುಕೊಳ್ಳುತ್ತಿದ್ದೀ?" ಕೇಳಿದ ಮಗ. "ಏಕೆಂದರೆ ಆ ನೋವು ಏನೆಂದು ನನಗೆ ಗೊತ್ತಪ್ಪ."
****
ಆತ ಕೈಕೊಟ್ಟನೆಂದು ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದಳು. ಪತ್ರ ಬರೆದಿಡುತ್ತಿರುವಾಗ ಹೊರಗಡೆ ಅಮ್ಮ ಯಾರಿಗೋ ಹೇಳುತ್ತಿರುವುದು ಕೇಳಿಸಿತು "ನನ್ನ ಮಗಳು ಎಂತಹ ಕಷ್ಟ ಬಂದರೂ ಎದುರಿಸುವಷ್ಟು ದಿಟ್ಟಳು." ಪೆನ್ ಜಾರಿ ಕೆಳಗೆ ಬಿತ್ತು!!
****
ಅಮ್ಮನನ್ನು ಕಳೆದುಕೊಂಡ ಅವನು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡ. ಅಪ್ಪ ಒಂದು ದಿನ ಅವನಮ್ಮ ಅವರಿಗೆ ಬರೆದಿದ್ದ ಪತ್ರವನ್ನು ಕೊಟ್ಟರು. "ನಮ್ಮ ಮಗ ಜಗತ್ತಿಗೆ ಬೆಳಕನ್ನು ಬೀರಬೇಕು ಎಂಬುದೇ ನನ್ನಾಸೆ" ಎಂದಿತ್ತು. ಮಗನ ಕಣ್ಣಲ್ಲಿ ಮಿಂಚು ಮೂಡಿತ್ತು!!
****
ಸಣ್ಣ ಮನಸ್ತಾಪ ಅವರಿಬ್ಬರಲ್ಲಿ. ದೂರ ಹೆಚ್ಚುತ್ತಾ ಹೋಯಿತು. ಸಂಬಂಧ ಇನ್ನೇನು ಸತ್ತೇ ಹೋಗುತ್ತದೆ ಎನ್ನವಾಗ ಮೌನ ಮುರಿಯಿತು. ಮತ್ತೆ ಅವರೀರ್ವರೀಗ ಆತ್ಮೀಯ ಸ್ನೇಹಿತರು!!
****
ಶಾಲೆಯಿಂದ ಮನೆಗೆ ಬಂದ ಮಕ್ಕಳಿಬ್ಬರು ತಂತಮ್ಮ ತಂದೆಯರನ್ನು "ಬೇರೆ ಧರ್ಮದವರು ಕೆಟ್ಟವರಂತೆ,  ಅವರೊಂದಿಗೆ ಮಾತಾಡಬಾರದಂತೆ ಹೌದಾ?" ಕೇಳಿದರು. ಅವರಿಬ್ಬರಿಗೂ ಉತ್ತರ ದೊರೆಯಿತು. ಒಬ್ಬ ಕೋಮುವಾದಿಯಾದ,  ಇನ್ನೊಬ್ಬ ಮಾನವತಾವಾದಿಯಾದ!
****
"ಅನಾಥಾಶ್ರಮದಲ್ಲಿಯೇ ನಾನು ಇದಕ್ಕಿಂತ ಚೆನ್ನಾಗಿಯೇ ಇರುತ್ತಿದ್ದೆ" ದತ್ತು ತಾಯ್ತಂದೆಯರ ತಿರಸ್ಕಾರಕ್ಕೆ ಒಳಗಾದ ಮಗು ಹೇಳಿತು!
****
ದಿನದಿನವೂ ಅವಳನ್ನು ಛೇಡಿಸುತ್ತಿದ್ದು ಒದೆ ತಿಂದ ಮೇಲೆಯೂ ಆ ಮಾನಗೆಟ್ಟ ಮನುಷ್ಯ ಹೇಳಿದ "ನನಗೆ ಗೊತ್ತು ಒಳ್ಳೆಯ ಜನ ಇದಕ್ಕಿಂತ ಹೆಚ್ಚು ಮುಂದೆ ಹೋಗಲಾರರು." ಅಷ್ಟೇ ಸಾಕಿತ್ತು ಅಗ್ನಿಪರ್ವತ ಸ್ಫೋಟವಾಗಲು. ಈಗವನು ಪೋಲೀಸರ ಅತಿಥಿ!!
****
"ಅವರಿಗೆ ಇಷ್ಟವಾಗೋಲ್ಲ ಅಂತ 20 ವರ್ಷಗಳ ನನ್ನ ನಿನ್ನ ಬಾಂಧವ್ಯವನ್ನು ಬಿಟ್ಟುಬಿಡುತ್ತಿದ್ದೀಯ. ಹೀಗೆ ಸಾಗಿದರೆ ಒಂದು ದಿನ ಎಲ್ಲರನ್ನೂ ಕಳೆದುಕೊಂಡುಬಿಡುವುದಿಲ್ಲವೇ?" ಕೇಳಿದ ತಮ್ಮ, ವಿವಾಹಿತ ಅಕ್ಕನನ್ನು. ಜ್ಞಾನೋದಯವಾಯಿತವಳಿಗೆ, ಮುಂದೆ ಯಾರನ್ನೂ ಕಳೆದುಕೊಳ್ಳಲಿಲ್ಲ ಅವಳು!!
****
ಅವರಿಬ್ಬರಲ್ಲಿ ದೋಷ ಇರಲಿಲ್ಲವೆಂದೇನೂ ಅಲ್ಲ, ಆದರೆ ಅವರು ತಮ್ಮಲ್ಲಿದ್ದ ಉತ್ತಮ ಅಂಶಗಳನ್ನೇ ಆ ಮಗುವಿಗೆ ಧಾರೆ ಎರೆದರು. ಈಗ ಆ ಮಗು ಅದ್ಭುತ ವ್ಯಕ್ತಿ!!
****
"ಹೋರಾಟ ಮಾಡಲೇಬೇಕೆ? ನನಗೇನೋ ನ್ಯಾಯ ಸಿಗುತ್ತದೆಂಬ ನಂಬಿಕೆಯಿಲ್ಲ" ಸ್ವಲ್ಪ ನಿರಾಶೆಯಿಂದಲೇ ನುಡಿದಳಾಕೆ. ತಕ್ಷಣವೇ ಗೆಳತಿ ನುಡಿದಳು "ಗೆಲುವು ಸೋಲು ನಂತರದ ಮಾತು, ಹೋರಾಟ ನಿನ್ನ ಅಸ್ತಿತ್ವದ ಸಂಕೇತ!!"
****
"ಬದುಕಲ್ಲಿ ಸೋತಿದ್ದೇನೆ, ಬದುಕಿಗಿಂತ ಸಾವೇ ಮೇಲೆನಿಸುತ್ತದೆ" ವಿಷಣ್ಣಳಾಗಿ ನುಡಿದಳಾಕೆ. "ಬದಲಾಯಿಸುವ ಪ್ರಯತ್ನ ಯಾವಾಗಲಾದರೂ ಮಾಡಿದ್ದೆಯಾ?" ಕೇಳಿದಳೀಕೆ. "ಆಗ ಅದರ ಅರಿವಿರಲಿಲ್ಲ, ಈಗ ಕಾಲ ಮುಗಿದಿದೆ." ಅರ್ಧ ಭಾಗ ಇನ್ನು ಉಳಿದಿದೆಯಲ್ಲಾ, ಪ್ರಯತ್ನಿಸಬಾರದೇಕೆ?" ಈಗವಳು ಮನಃಶಾಸ್ತ್ರಜ್ಞೆ!!
****
"ತಪ್ಪು ಮಾಡಿದೆನಮ್ಮ" 16 ವರ್ಷಕ್ಕೆ ವಿಧವೆಯಾದ ಮಗಳನ್ನು ಅಪ್ಪಿ ತಂದೆ ನುಡಿದರು "ಇನ್ನು ಮುಂದೆ ಈ ಎಲ್ಲಾ ಗೊಡ್ಡು ಸಂಪ್ರದಾಯಗಳಿಗೆ ಮುಕ್ತಾಯ. ನೀನು ನಿನಗಿಷ್ಟ ಬಂದಂತೆ ಬದುಕು ಮಗು!!"
****
"ಮೋಸ, ಮೋಸ, ಮೋಸ, ಎಲ್ಲೆಲ್ಲೂ ಮೋಸ" ಮನೆಗೆ ಬಂದು ಕೋಪದಿಂದ ಬ್ಯಾಗ್ ಬಿಸಾಕಿದ ಮಗನಿಗೆ ಅಮ್ಮ ಹೇಳಿದಳು "ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರಪ್ಪ!!"
****
"ಚಿನ್ನು, ನೀನು ಓದ್ತೀನಿ ಅಂದ್ರೆ ಈ ತಿಂಡಿಯೆಲ್ಲ ನಿನಗೇನೇ" 10ನೇ ತರಗತಿ ಓದುತ್ತಿದ್ದ ಮಗನನ್ನು ಪುಸಲಾಯಿಸಿದಳಾಕೆ. ಸ್ವಲ್ಪ ಹೊತ್ತಾದ ಮೇಲೆ "ಯಾಕೊ ಮಲಗಿದ್ದೀಯ, ಓದಲ್ವಾ?" ಕೇಳಿದಳು. "ಇಷ್ಟೊಂದು ತಿನಿಸಿ, ಓದು ಅಂದ್ರೆ ಹೇಗಮ್ಮ? ನಿದ್ರೆ ಬರ್ತಾ ಇದೆ, ನಾಳೆ ಓದ್ತೀನಿ!!" 
****
"ನಿನಗೇನಾದರೂ ಬುದ್ಧಿ ಇದೆಯೇನಮ್ಮ? ಅಜ್ಜಿಗೆ ಹುಷಾರಿಲ್ಲ ಎಂದರೂ ನನಗೇಕೆ ಫೋನ್ ಮಾಡಲಿಲ್ಲ?" ಕೂಗಾಡಿದನಾತ. "ನನ್ನ ನೋವು ಅರ್ಥ ಆಗಲಿ ಅಂತ. 2 ದಿನದಿಂದ ನಾನೂ ನಮ್ಮಮ್ಮನನ್ನು ನೋಡಲು ಆಸ್ಪತ್ರೆಗೆ ಹೋಗಬೇಕೂಂತಾ ಕೇಳುತ್ತಿಲ್ಲವೇ? ನನಗಿಬ್ಬರೂ ಬೇಕು. ನಿಮ್ಮಿಬ್ಬರ ಜಗಳದಲ್ಲಿ ನನ್ಯಾಕೆ ತರುತ್ತೀರಾ? " ಮರುಪ್ರಶ್ನಿಸಿದಳು ಮಗಳು. ನಿರುತ್ತರನಾದ ತಂದೆ!!
****
ಟಿವಿಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧದ ಮೆರವಣಿಗೆಯಲ್ಲಿ ಮಗಳನ್ನು ಕಂಡು ತಂದೆಗೆ ಆಘಾತವಾಯಿತು. "ಏನಮ್ಮ ಇದು, ಇಷ್ಟು ದಿನ ನನ್ನ ಮಾತನ್ನು ಮೀರದವಳು ಈಗ ......?" ಕೂಗಾಡಿದರು. "ಈ ಬಾರಿಯ ಮಹಿಳಾ ದಿನದ ಥೀಮ್ 'ಬದಲಾವಣೆಗೆ ಧೈರ್ಯವಾಗಿ ಮುಂದಡಿ ಇಡಿ' ಎಂದು" ಶಾಂತವಾಗಿ ಉತ್ತರಿಸಿದಳು ಮಗಳು!!
****
ಬದುಕಿನಲ್ಲಿ ತನಗೆ ಪ್ರಾಮುಖ್ಯತೆಯೇ ಇಲ್ಲವೆಂದುಕೊಂಡವಳು ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರದ ಕಡೆ ಹೋದಳು.  ಅಲ್ಲಿ ಅಕ್ಷರ ಬಾರದ ಮೀನುಗಾರ ಹೆಣ್ಣುಮಕ್ಕಳು ಸಂಘದ ಲೆಕ್ಕ ಅರ್ಥವಾಗದೆ ಒದ್ದಾಡುವುದನ್ನು ಕಂಡು ಸಹಾಯ ಮಾಡಿದಳು. ಎಲ್ಲರೂ ಅವಳನ್ನು ಸುತ್ತುವರೆದುಬಿಟ್ಟರು. ಈಗವಳು ಆ ಸಂಘದ ಮಾರ್ಗದರ್ಶಕಳು. ಇವಳು ಅವರಿಗೆ ನೆರವು ನೀಡಿದ್ದಾ ಅಥವಾ .........!!
****
"ಯಾಕೊ ದಿನಾಲೂ ಹೊಡೆಸಿಕೊಂಡು ಬರ್ತೀಯಾ, ತಿರುಗಿಸಿ ಒಂದು ಕೊಡಬಾರದಾ? ಆಗ ನೋಡು ಸುಮ್ಮನಾಗ್ತಾನೆ!" "ಮತ್ಯಾಕಮ್ಮ ನೀನು ಅಪ್ಪನಿಗೆ ತಿರುಗಿಸಿ ಕೊಡಬಾರದು?" ಪ್ರಶ್ನಿಸಿದ 4ನೇ ತರಗತಿಯ ಬಾಲಕ!!
****
"ನಮಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ ಅಂತ ಬೋರ್ಡ್ ಹಾಕಿದ್ದೀರಲ್ಲ, ನಾವೇ ಅಲ್ಲವೇ ಈ ದೇವಸ್ಥಾನವನ್ನು ಕಟ್ಟಿಕೊಟ್ಟದ್ದು?" ಪ್ರಶ್ನಿಸಿದನಾತ!!
****
ಮಹಿಳಾ ದಿನದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ಬಿದ್ದರೂ ಬಹುಮಾನ ಗಳಿಸಿದಳಾಕೆ. "ಇದು ಬೇಕಿತ್ತಾ ನಿನಗೆ?" ಪತಿಯ ಪ್ರಶ್ನೆ. "ಅಡಿಗೆಮನೆಯಲ್ಲಿ ಮೊನ್ನೆ ನನ್ನ ಕೈಸುಟ್ಟಾಗ ಈ ರೀತಿ ಕೇಳಲೇ ಇಲ್ಲ?" ಕೂಲಾಗಿ ಕೇಳಿದಳಾಕೆ!!
- ಸುಧಾ ಜಿ

No comments:

Post a Comment