"ಅಶ್ವತ್ಥ" ರವರ ಕಾದಂಬರಿ ಆಧಾರಿತವಾಗಿ "ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ ನಿರ್ಮಾಪಕ "ಬಿ. ತಿಮ್ಮಣ್ಣರವರ" "ಮಂಗಳ ಮೂವೀಸ್ " ನ ನಿರ್ಮಾಣದೊಂದಿಗೆ 1981 ರಲ್ಲಿ ತೆರೆಕಂಡು "ಅತ್ಯುತ್ತಮ ಚಲನಚಿತ್ರ" ಪ್ರಶಸ್ತಿಯನ್ನು ಪಡೆದ ಚಲನಚಿತ್ರ "ರಂಗನಾಯಕಿ". ಆರತಿ, ಅಶೋಕ್, ಅಂಬರೀಶ್ ಮೊದಲಾದವರ ತಾರಾಗಣದಲ್ಲಿ ಮೂಡಿಬಂದ ಈ ಚಲನಚಿತ್ರವು ರಂಗಭೂಮಿಯ ಕನಸು ಹೊತ್ತ ಕಲಾವಿದೆಯೊಬ್ಬಳ ಜೀವನಾಧಾರಿತವಾದದ್ದು. ಪುಟ್ಟಣ್ಣ ಕಣಗಾಲ್ ಕಲಾತ್ಮಕ ಶೈಲಿ, ಆರತಿಯವರ ಮನೋಜ್ಞ ಭಾವಾಭಿನಯ ರಂಗನಾಯಕಿ ಸಿನಿಮಾವು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಈ ಚಲನಚಿತ್ರದಿಂದಾಗಿ ಆರತಿಯವರು ಇಂದಿಗೂ ಕನ್ನಡ ಸಿನಿಮಾ ಪ್ರಪಂಚದಲ್ಲಿ "ರಂಗನಾಯಕಿ" ಎಂದೇ ಗುರುತಿಸಲ್ಪಡುತ್ತಾರೆ. ಅವರ ಸಿನಿಮಾ ಜೀವನದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ.
ಚಿತ್ರದಲ್ಲಿ ನಾಯಕಿಯ ಹೆಸರು ರಂಗನಾಯಕಿ (ರಂಗೂ), ನಾಯಕನ ಹೆಸರು ರಾಜ, ಒಬ್ಬ ಶ್ರೀಮಂತ ಮನೆತನದ ಯುವಕ. ಚಿತ್ರದ ಮತ್ತೊಂದು ಪ್ರಮುಖವಾದ ಪಾತ್ರ ಅಂಬರೀಶ್ ನಟನೆಯಲ್ಲಿ ಮೂಡಿಬಂದ ರಾಮಣ್ಣನ ಪಾತ್ರ. ಶ್ರೀ ಶಾರದ ನಾಟಕ ಮಂಡಲಿ ಎಂಬ ನಾಟಕ ಕಂಪನಿಯ ಮಾಲೀಕರು ಅನಾಥರಾದ ರಂಗನಾಯಕಿ ಮತ್ತು ರಾಮಣ್ಣರನ್ನು ಸಾಕಿ ಬೆಳೆಸಿ ತಮ್ಮ ಸ್ವಂತ ಮಕ್ಕಳಂತೇ ಪ್ರೀತಿಸುತ್ತಿರುತ್ತಾರೆ. ರಂಗನಾಯಕಿಗೆ ಬಾಲ್ಯದಿಂದಲೂ ನಟನೆಯಲ್ಲಿ ಅಪಾರವಾದ ಆಸಕ್ತಿ ಇರುತ್ತದೆ, ಆಕೆಯ ನಟನೆಯಿಂದಾಗಿ ನಾಟಕಗಳು ಎಲ್ಲಾ ಊರಿನಲ್ಲೂ ಅದ್ಭುತವಾಗಿ ಪ್ರದರ್ಶನಗೊಂಡು ಯಶಸ್ವಿಯಾಗುತ್ತಿರುತ್ತವೆ. ನಾಯಕ ರಾಜ ರಂಗನಾಯಕಿಯ ರೂಪ, ನಟನಾ ಶೈಲಿಗೆ ಆಕರ್ಷಿತನಾಗಿ ಆಕೆಯನ್ನು ಪ್ರೀತಿಸುತ್ತಾನೆ. ನಂತರ ಇಬ್ಬರೂ ಪರಸ್ಪರ ಆಕರ್ಷಿತರಾಗಿ ಪ್ರೀತಿಸಲು ಆರಂಭಿಸುತ್ತಾರೆ. ತಂದೆತಾಯಿಯರ ವಿರೋಧದ ನಡುವೆಯೇ ರಂಗನಾಯಕಿಯನ್ನು ವಿವಾಹವಾಗಿ ಒಂದು ಮಗುವನ್ನÀ್ತಪಡೆಯುತ್ತಾನೆ. ಆಕೆಯ ನಟನೆಯಿಂದಾಗಿಯೇ ಆಕರ್ಷಿತನಾಗಿ ಪ್ರೀತಿಸಿ ವಿವಾಹವಾದ ರಾಜ, ವಿವಾಹಾನಂತರ ತನ್ನ ಪತ್ನಿಯು ನಟಿಸುವುದು ತನ್ನ ಮನೆತನದ ಮರ್ಯಾದೆಗೆ ಅವಮಾನಕರ ಎಂದು ಪತ್ನಿಗೆ ನಟಿಸುವುದನ್ನು ನಿರ್ಬಂಧಿಸುತ್ತಾನೆ. ಸುಖಸಂಸಾರದಲ್ಲಿ ಸಕಲ ಸೌಕರ್ಯಗಳ ನಡುವೆ ಇದ್ದರೂ ರಂಗೂ ಮನಸ್ಸು ಅಭಿನಯದೆಡೆಗೆ ತುಡಿಯುತ್ತಿರುತ್ತದೆ. ಒಮ್ಮೆ ತನ್ನ ಸಾಕು ತಂದೆಯ ಕಂಪನಿ ಸಂಕಷ್ಟದಲ್ಲಿದ್ದಾಗ, ಅವರ ಸಹಾಯಾರ್ಥವಾಗಿ ರಂಗನಾಯಕಿ ನಾಟಕದಲ್ಲಿ ಅಭಿನಯಿಸುತ್ತಾಳೆ. ಇದರಿಂದ ಬೇಸರಗೊಂಡ ರಾಜ ತನ್ನ ಪತ್ನಿಯನ್ನು ತೊರೆದು ಮಗನೊಂದಿಗೆ ಪರವೂರಿಗೆ ಹೊರಟು ಹೋಗುತ್ತಾನೆ. ಇದರಿಂದಾಗಿ ರಂಗನಾಯಕಿ ಮಾನಸಿಕವಾಗಿ ತತ್ತರಗೊಳ್ಳುತ್ತಾಳೆ. ಅವಳ ಸಾಕುತಂದೆ ಹಾಗೂ ರಾಮಣ್ಣ ಅವಳೊಂದಿಗೆ ಇದ್ದು, ಪ್ರಸಿದ್ಧ ಕಲಾವಿದೆಯಾಗಿ ಬೆಳೆಯುವಂತೆ ಪ್ರೋತ್ಸಾಹಿಸುತ್ತಾರೆ. ನಂತರ ರಂಗನಾಯಕಿ "ಮಾಲ" ಎಂಬ ಹೆಸರಿನಿಂದ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿ ಪ್ರಸಿದ್ದ ನಾಯಕಿಯಾಗಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತಾಳೆ. ಸಮಾಜದಲ್ಲಿ, ನಟನಾ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದರೂ ಸಹ ತನ್ನ ಮಗನನ್ನು ನೆನೆದು ಸದಾ ಕೊರಗುತ್ತಿರುತ್ತಾಳೆ.
ರಂಗನಾಯಕಿಯ ನಟನೆಯಿಂದ ಆಕರ್ಷಿತನಾದ ಶ್ರೀಮಂತ ಯುವಕ "ಶೇಖರ್" ಅವಳಲ್ಲಿ ಅನುರಕ್ತನಾದ. ಆದರೆ ರಂಗನಾಯಕಿ ಅವನನ್ನು ತನ್ನ ಮಗನಂತೆ ತಿಳಿದು ತಾಯಿಯಂತೆ ಸಲುಗೆಯಿಂದ ವರ್ತಿಸುತ್ತಿರುತ್ತಾಳೆ. ಇದನ್ನು ಕಂಡ ಪತ್ರಿಕೆಗಳು, ಜನರು ರಂಗನಾಯಕಿ ಹಾಗೂ ಶೇಖರ್ ನಡುವೆ ಅನೈತಿಕ ಸಂಬಂಧವಿದೆಯೆಂದು ಗಾಳಿಸುದ್ದಿ ಹಬ್ಬಿಸುತ್ತಾರೆ.
ಹಲವು ವರುಷಗಳ ನಂತರ ಪತಿ ರಾಜನನ್ನು ಭೇಟಿಯಾದ ರಂಗನಾಯಕಿ ತನ್ನ ಮಗನನ್ನು ಭೇಟಿಮಾಡಿಸುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಪತಿಯು ನಿರಾಕರಿಸುತ್ತಾನೆ. ನಂತರ ಮಗನನ್ನು ಭೇಟಿ ಮಾಡಲು ತಾಯಿಯು ಪರಿತಪಿಸುವುದನ್ನು ಕಂಡ ಪತಿ ರಾಜನು ರಂಗನಾಯಕಿಗೆ ಮಗನನ್ನು ಭೇಟಿಮಾಡಿಸಲು ಒಪ್ಪಿಕೊಳ್ಳುತ್ತಾನೆ. ಆದರೆ ಕೇವಲ ದೂರದಿಂದ ಮಾತ್ರ ನೋಡಬೇಕೆಂದು ನಿರ್ಬಂಧಿಸುತ್ತಾನೆ. ಅನಿವಾರ್ಯ ಕಾರಣಗಳಿಂದಾಗಿ ಆಕೆಗೆ ತನ್ನ ಮಗನನ್ನು ನೋಡಲು ಸಾದ್ಯವಾಗುವುದಿಲ್ಲ. ಇದರಿಂದಾಗಿ ಆಕೆ ಸಂಪೂರ್ಣವಾಗಿ ಕುಗ್ಗಿಹೋಗುತ್ತಾಳೆ. ಪತ್ರಿಕೆಯಲ್ಲಿ ತನ್ನ ಮತ್ತು ಶೇಖರ್ ನ ಸಂಬಂಧದ ಬಗ್ಗೆ ಬರುತ್ತಿರುವ ವರದಿಗಳು, ತಾನು ಹೆತ್ತ ಮಗನನ್ನು ಹಲವು ವರುಷಗಳ ನಂತರ ಭೇಟಿಯಾಗಲು ಸಾಧ್ಯವಾಗದಂತಹ ಸ್ಥಿತಿ ಇವುಗಳೆಲ್ಲಾ ಅವಳ ಮನಸ್ಸನ್ನು ದುರ್ಬಲಗೊಳಿಸುತ್ತವೆ. ಇದರಿಂದಾಗಿ ಆಕೆ ನಿದ್ರೆಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗುತ್ತಾಳೆ.
ವಿಮಾನದಲ್ಲಿ ಶೇಖರನ ತಂದೆ ರಾಜ ಮಗನಿಗೆ ವಿವಾಹವಾಗಲು ತಿಳಿಸುತ್ತಾನೆ, ಆದರೆ ಶೇಖರ್ ತಾನು ನಟಿ ಮಾಲಾಳನ್ನು ಪ್ರೀತಿಸುತ್ತಿರುವುದಾಗಿ, ಆಕೆಯನ್ನೇ ವಿವಾಹವಾಗಲು ಬಯಸಿರುವುದಾಗಿ ತಿಳಿಸುತ್ತಾನೆ. ಮಗ ತನ್ನ ತಾಯಿಯನ್ನೇ ವಿವಾಹವಾಗಲು ಬಯಸಿರುವುದನ್ನು ಕಂಡ ತಂದೆ ಆಘಾತಗೊಂಡು, ಶೇಖರನಿಗೆ ಮಾಲಾಳೇ ಆತನ ಹೆತ್ತ ತಾಯಿ ಎಂದು ತಿಳಿಸುತ್ತಾನೆ. ವಿಷಯ ತಿಳಿದ ಶೇಖರ್ ತನ್ನ ತಾಯಿಗೇ ತಾನು ಪತಿಯಾಗಲು ಬಯಸಿದ್ದನ್ನು ನೆನೆದು ಪಶ್ಚಾತ್ತಾಪಗೊಂಡು ತನ್ನ ತಾಯಿಯ ಬಳಿ ಕ್ಷಮೆ ಕೇಳಿ, ಕೊನೆಯವರೆಗೂ ಆಕೆಯ ಸೇವೆಮಾಡಿ ತನ್ನ ಪಾಪ ಪರಿಹಾರಕ್ಕೆ ಪ್ರಯತ್ನಿಸುವೆ ಎಂದು ತಂದೆಗೆ ಹೇಳಿ, ತಾಯಿಯ ಬಳಿ ಕ್ಷಮೆ ಕೇಳಲು ಬರುತ್ತಾನೆ. ಆದರೆ ಅಷ್ಟರಲ್ಲಾಗಲೇ ರಂಗನಾಯಕಿ ಮರಣ ಹೊಂದಿರುತ್ತಾಳೆ.
ಹೀಗೆ ನಟಿಯಾಗಿ ಬದುಕನ್ನು ಆಯ್ದುಕೊಂಡ ಹೆಣ್ಣುಮಗಳು ತನ್ನ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದ್ದರೂ ಸಹ, ಸಮಾಜವು ಆಕೆಯನ್ನು ಸ್ವೀಕರಿಸುವ ರೀತಿ, ಸಮಾಜದಲ್ಲಿ ಹಾಗೇ ಉದ್ಯೋಗ ಕ್ಷೇತ್ರದಲ್ಲಿ ಆಕೆ ಎದುರಿಸುವ ಸಮಸ್ಯೆಗಳು, ವಿಕೃತ ಮನಸ್ಸಿನ ಪುರು 80ರ ದಶಕದಲ್ಲೇ ತೆರೆಕಂಡ ಸಿನಿಮಾವು ತನ್ನ ಕಥಾಹಂದರದಿಂದಾಗಿ ಇಂದಿಗೂ ಪ್ರಸ್ತುತ ಎನಿಸುತ್ತದೆ. ಈ ಚಿತ್ರವು ನಟನಾ ಕ್ಷೇತ್ರದಲ್ಲಿರುವ ಮಹಿಳೆಯರ ಸ್ಥಾನಮಾನಗಳು, ಅವರು ಎದುರಿಸುವ ಸಮಸ್ಯೆಗಳು, ಸಮಾಜ ಅವರನ್ನು ಸ್ವೀಕರಿಸುವ ರೀತಿ ಮೊದಲಾದವುಗಳ ಬಗ್ಗೆ ನಾವೆಲ್ಲರೂ ಯೋಚಿಸುವಂತೆ ಮಾಡುತ್ತದೆ.
– ಚಂದನ
No comments:
Post a Comment