Pages

Sunday, 26 February 2017

ಲೇಖನ - ನಮ್ಮೂರು

 
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೋಕಿನಲ್ಲಿರುವ ಪುಟ್ಟ ಗ್ರಾಮ ನಮ್ಮ ಮುಡಿಗುಂಡ. ಈ ಗ್ರಾಮವು ಚೋಳರ ಕಾಲದಲ್ಲಿ ನಿರ್ಮಿತವಾಗಿದೆ. ಊರ ಮಧ್ಯೆ ಇರುವ ಮಾರಮ್ಮನ ದೇವಸ್ಥಾನದಲ್ಲಿರುವ ಶಾಸನದಿಂದ ಚೋಳರ ಕಾಲದ್ದು  ತಿಳಿದು ಬಂದಿದೆ. ವಿಶೇಷವೆಂದರೆ ಈ ಊರಿನ ನಾಲ್ಕು ದಿಕ್ಕುಗಳಲ್ಲು ದೇವಸ್ಥಾನವಿದೆ. ಪೂರ್ವ ದಲ್ಲಿ -ಶ್ರೀ ವರಸಿದ್ದಿವಿನಾಯಕ ದೇವಸ್ಥಾನ, ಪಶ್ಚಿಮದಲ್ಲಿ-ನಾರಯಣಸ್ವಾಮಿ ದೇವಸ್ಥಾನ, ಉತ್ತರದಲ್ಲಿ - ಮುಳ್ಳಾಚಮ್ಮ ದೇವಸ್ಥಾನ, ದಕ್ಷಿಣದಲ್ಲಿ - ಬಸವೇಶ್ವರ ದೇವಸ್ಥಾನ. ಜೊತೆಗೆ ಊರ ಒಳಗೆ ಮುಡಿಗುಂಡೇಶ್ವರ, ಆಂಜನೇಯಸ್ವಾಮಿ, ಗಂಗಾಳಮ್ಮ ದೇವಸ್ಥಾನಗಳಿವೆ.

ಈ ಊರಿಗೆ ಮುಡಿಗುಂಡ ಎಂಬ ಹೆಸರು ಬರುವುದರ ಹಿಂದೆ ಒಂದು  ಕಥೆ ಇದೆ.ಚೋಳ ಮಹಾರಾಜರು ಪರಿವಾರ ಸಮೇತರಾಗಿ ತೀರ್ಥ ಯಾತ್ರೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ರಾತ್ರಿ ಸಮಯದಲ್ಲಿ ರಾಜರ ಮಗುವಿಗೆ ತೀವ್ರ ಅಸ್ವಸ್ಥತಯಾಯಿತು. ಆ ರಾತ್ರಿ ಕನಸಿನಲ್ಲಿ ರಾಜರಿಗೆ ಶಿವನ ದರ್ಶನವಾಗುತ್ತದೆ, ನಂತರ ಮಹಾರಾಜರು ಹತ್ತಿರದಲ್ಲಿದ್ದ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಹಾಗು ದರ್ಶನ ಮಾಡುವಾಗ ಮಗುವಿಗೆ ತಲೆಯ ಮುಡಿ ಕೊಡುವಂತೆ ಪ್ರೇರಣೆಯಾಗುತ್ತದೆ.
ಅದರಂತೆ ಮಗುವಿಗೆ ಮುಡಿಯನ್ನು ಕೊಡಿಸುತ್ತಾರೆ. ಅದರಿಂದ ಮಗುವಿನ ಕಾಯಿಲೆ ಗುಣಮುಖವಾಗುತ್ತದೆ. ರಾಜರು ಮಗುವಿಗೆ ಮುಡಿಯನ್ನು ಕೊಡಿಸಿದ್ದಕ್ಕೆ ಊರಿಗೆ ಮುಡಿಕೊಂಡ ಎಂದು ಹೆಸರಾಯಿತು ಅದೇ ಕ್ರಮೇಣ ಮುಡಿಗುಂಡ ಎಂದಾಯಿತು. 
ನಮ್ಮೂರಿನಲ್ಲಿ ಮಾರಿಹಬ್ಬವನ್ನು ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದರು ಕಾಲ ಕ್ರಮೇಣ ಅದು ನಿಂತು ಈಗ ನಾರಯಣಸ್ವಾಮಿ ದೇವಾಲಯದಲ್ಲಿ ವರ್ಷಕೊಮ್ಮೆ ಕಾರ್ತೀಕ ಮಾಸದ ಪೂಜೆಯನ್ನು ಊರಿನ ಯವಕರ ತಂಡ  ವಿಶೇಷವಾಗಿ ಆಚರಿಸುತ್ತಾ ಬಂದಿದ್ದಾರೆ.
ರೇಷ್ಮೆ ನಾಡು ಎಂದೇ ಹೆಸರಾದ ಕೊಳ್ಳೇಗಾಲದ ಹತ್ತಿರವಿರುವ ಈ ಗ್ರಾಮದಲ್ಲಿ ರೇಷ್ಮೆ ಕಾರ್ಖಾನೆ ಇದೆ. ಇಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ  ಬಟ್ಟೆ ಹಾಗೂ ಸೀರೆಗಳು ದೊರೆಯುತ್ತದೆ. ರೇಷ್ಮೆಗೂಡಿನ ಮಾರುಕಟ್ಟೆಗೆ ಈ ಗ್ರಾಮ ಪ್ರಸಿದ್ಧಿಯಾಗಿದೆ. ಪ್ರತಿನಿತ್ಯ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ.
ಈ ಊರಿನಲ್ಲಿ ಜ್ಞಾನಕ್ಕೆ ದೇಗುಲವಾದ ಶಾಲೆಗಳು ಇದೆ. ೧ರಿಂದ ೭ನೇ ತರಗತಿಯವರಗೆ ಸರಕಾರಿ ಶಾಲೆಯಿದ್ದು, ೮ರಿಂದ ೧೦ರವರಗೆ ಜೆ.ಎಸ್.ಎಸ್.ಶಾಲೆಯಲ್ಲಿ ವಿಧ್ಯಾರ್ಥಿ-ವಿದ್ಯಾರ್ಥಿನಿಯರು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ  ಅನೇಕ ವಿದ್ಯಾವಂತರು ಇಂದು ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ.
ಇಂತಹ ಗ್ರಾಮವನ್ನು ನಮ್ಮೂರು ಎಂದು ಹೇಳಿಕೊಳ್ಳಲು ನನಗೆ ಸಂತೋಷವೆನಿಸುತ್ತದೆ.
-- ಜಯದೇವಿ.ಬಿ       

No comments:

Post a Comment